ಪರ್ಕಳ: ಜಯಂತ್ ಕಾಯ್ಕಿಣಿಯಿಂದ ಸೌಖ್ಯ ಸಾಹಿತ್ಯಧಾರೆ

ಉಡುಪಿ, ಡಿ.23: ಕನ್ನಡದ ಕವಿ, ಸಾಹಿತಿ ಜಯಂತ್ ಕಾಯ್ಕಿಣಿ ಅವರಿಂದ ಸೌಖ್ಯ ಸಾಹಿತ್ಯ ಧಾರೆಯು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಪರೀಕ ಸೌಖ್ಯವನದ ಕ್ಷೇಮ ಹಾಲ್‌ನಲ್ಲಿ ಡಿ.22ರಂದು ಜರಗಿತು.
ಬಳಿಕ ಮಾತನಾಡಿದ ಕಾಯ್ಕಿಣಿ, ಈವರೆಗೆ 500ಕ್ಕೂ ಹೆಚ್ಚು ಕವಿತೆಗಳನ್ನು ಬರೆದಿದ್ದು ಮುಂಗಾರು ಮಳೆಯ ಸಾಹಿತ್ಯವು ನನಗೆ ಹೆಸರನ್ನು ತಂದು ಕೊಟ್ಟಿರುವುದರ ಜೊತೆಗೆ ಸಮಾಜದಲ್ಲಿ ನಾನು ಗುರುತಿಸಿಕೊಳ್ಳುವಂತಾಯಿತು. ಸಮಾಜದಲ್ಲಿ ಎಲ್ಲರು ಸಹಮತ, ಸಹಬಾಳ್ವೆ ಮತ್ತು ಸಮಾನತೆಯೊಂದಿಗೆ ಬದುಕಬೇಕು ಎಂದು ತಿಳಿಸಿದರು.
ಜಯಂತ್ ಕಾಯ್ಕಿಣಿ ಅವರನ್ನು ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ ಸನ್ಮಾನಿಸಿದರು. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಗೋಪಾಲ ಪೂಜಾರಿ ಉಪಸ್ಥಿತರಿದ್ದರು.
ಕಾಯ್ಕಿಣಿ ಅವರ ಬಗ್ಗೆ ಆಸ್ಪತ್ರೆಯ ಕವಯತ್ರಿ ಅರುಣ ಹೆಬ್ರಿ ಬರೆದ ಕವನ ಸಾಹಿತ್ಯ ಸಮ್ಮಾನ ಪತ್ರವನ್ನು ಡಾ.ನವ್ಯತಾ ಬಲ್ಲಾಳ್ ವಾಚಿಸಿದರು. ಆಸ್ಪತ್ರೆಯ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಡಾ.ಶೋಭಿತ್ ಶೆಟ್ಟಿ ವಂದಿಸಿದರು.







