ಜಾತಿಗಣತಿ ವರದಿಯನ್ನು ಸರಕಾರ ಸ್ವೀಕರಿಸಿ ಚರ್ಚೆಗೆ ಬಿಡಲಿ: ಮಾವಳ್ಳಿ ಶಂಕರ್

ಉಡುಪಿ, ಡಿ.24: ರಾಜ್ಯ ಸರಕಾರ 168ಕೋಟಿ ರೂ. ಅನುದಾನ ನೀಡಿ ಕಾಂತರಾಜು ಆಯೋಗದಿಂದ ರಾಜ್ಯದ ಎಲ್ಲ ಸಮುದಾಯಗಳ ಕುರಿತು ಜಾತಿ ಗಣತಿಯನ್ನು ನಡೆಸಿದೆ. ರಾಜ್ಯ ಸರಕಾರ ಕೂಡಲೇ ಈ ಜಾತಿಗಣತಿ ವರದಿಯನ್ನು ಸ್ವೀಕರಿಸಿ, ಜನಾಭಿಪ್ರಾಯಕ್ಕಾಗಿ ಬಿಡುಗಡೆಗೊಳಿಸಿ ಚರ್ಚೆಗೆ ಅವಕಾಶ ಮಾಡಿ ಕೊಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದ್ದಾರೆ.
ಬನ್ನಂಜೆಯ ಶ್ರೀನಾರಾಯಣ ಗುರು ಸಭಾಭವನದಲ್ಲಿ ರವಿವಾರ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡುತಿದ್ದರು. ಜನಗಣತಿ ವರದಿ ಬಿಡುಗಡೆಗೆ ಮೊದಲೇ ಬಲಾಢ್ಯ ಜಾತಿಗಳು ಅದನ್ನು ವಿರೋಧಿಸುವ ಕಾರ್ಯ ಮಾಡುತ್ತಿದೆ. ಇದು ಆರೋಗ್ಯಕರ ಬೆಳವಣಿಗೆ ಅಲ್ಲ. ಪ್ರತಿ ಜಾತಿಗಳ ಆರ್ಥಿಕ, ಸಾಮಾಜಿಕ, ಆರ್ಥಿಕ ವಿಚಾರಗಳು ಜನರಿಗೆ ತಿಳಿಯಬೇಕಾದರೆ ಮೊದಲು ಈ ವರದಿಯನ್ನು ಬಹಿರಂಗ ಪಡಿಸಬೇಕು. ಇದರಲ್ಲಿ ಲೋಪಗಳಿದ್ದ ಸರಕಾರ ಮುಂದೆ ಅದನ್ನು ಸರಿಪಡಿಸುವ ಕಾರ್ಯ ಮಾಡಬೇಕು ಎಂದು ಅವರು ತಿಳಿಸಿದರು.
ಶೋಷಿತ ಸಮುದಾಯಗಳಿಗೆ ಸಂವಿಧಾನಾತ್ಮಕ ಹಕ್ಕುಗಳನ್ನು ನೀಡುವಾಗ ಬಲಿಷ್ಠ ಸಮುದಾಯಗಳು ಈ ರೀತಿ ತಕರಾರು ತೆಗೆಯುವುದು ಇದು ಹೊಸತಲ್ಲ ಎಂದ ಅವರು, ಕಾಂತಾರಾಜು ವರದಿ ಸೋರಿಕೆಯಾಗಿದೆ ಎಂಬುದು ಕೇವಲ ವದಂತಿ. ಅದನ್ನು ಸಾಕಷ್ಟು ಡಿಜಿಟಲೀಕರಣ ಮಾಡಿ ಸುರಕ್ಷಿತವಾಗಿ ಇಡಲಾಗಿದೆ. ಸುಮಾರು 1.65ಲಕ್ಷ ಶಿಕ್ಷಕರು ಹಾಗೂ ಇತರರು ಮನೆಮನೆಗೆ ತೆರಳಿ ವೈಜ್ಞಾನಿಕ ವಾಗಿ ಈ ಸಮೀಕ್ಷೆ ನಡೆಸಿದ್ದಾರೆ ಎಂದರು.
ಜಾತಿಗಣತಿಗೆ ಆರ್‌ಎಸ್‌ಎಸ್ ವಿರೋಧದ ಕುರಿತ ಪ್ರಶ್ನೆಗೆ ಉತ್ತರಿಸಿದ ಮಾವಳ್ಳಿ ಶಂಕರ್, ಜಾತಿಗಣತಿ ವಿರೋಧ ಮಾಡುವವರು ಆರ್ಥಿಕವಾಗಿ ಹಿಂದುಳಿದವರಿಗೆ ನೀಡುವ ಮೀಸಲಾತಿಯನ್ನು ಹೇಗೆ ಒಪ್ಪಿಕೊಂಡಿದ್ದಾರೆ. ಸಂವಿಧಾನದಲ್ಲಿ ಇಲ್ಲದ ಕೇವಲ ಶೇ.4ರಷ್ಟಿರುವವರಿಗೆ ಶೇ.10ರಷ್ಟು ಮೀಸಲಾತಿ ನೀಡುವಾಗ ಆರ್‌ಎಸ್‌ಎಸ್ ಯಾಕೆ ಪ್ರಶ್ನೆ ಮಾಡಿಲ್ಲ. ಧಮನಿತ ಸಮು ದಾಯಗಳಿಗೆ ಅನುಕೂಲ ಮಾಡಿಕೊಟ್ಟರೆ ಈ ದೇಶ ಛಿದ್ರವಾಗುತ್ತದೆ ಎಂಬ ಆರ್‌ಎಸ್‌ಎಸ್‌ನ ವ್ಯಂಗ್ಯದ ಮಾತು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಹಿಜಾಬ್ ವಿವಾದವೇ ಅಲ್ಲ
ಹಿಜಾಬ್, ಹಲಾಲ್ ಕಟ್‌ಗಳು ವಿವಾದವೇ ಅಲ್ಲ. ಇದರಿಂದ ಯಾರಿಗೂ ತೊಂದರೆ ಆಗಿಲ್ಲ. ಈ ದೇಶವನ್ನು ಕಾಡುತ್ತಿರುವ ಹಸಿವು, ನಿರುದ್ಯೋಗದಂತಹ ಗಂಭೀರ ವಿಚಾರಗಳನ್ನು ಬಿಟ್ಟು ಇದನ್ನು ವಿವಾದವನ್ನಾಗಿ ಮಾಡಲಾಗುತ್ತಿದೆ. ಎಷ್ಟೋ ಶಾಲೆಗಳಲ್ಲಿ ಸರಿಯಾದ ಕಟ್ಟಡ, ಶೌಚಾಲಯ, ಕುಡಿಯುವ ನೀರು ಇಲ್ಲ. ಅಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ನಾವು ಯೋಚನೆ ಮಾಡಬೇಕು. ಭಾವನಾತ್ಮಕ ವಿಚಾರವನ್ನು ಜನರ ಮಧ್ಯೆ ತಂದು ಬೆಂಕಿ ಹಚ್ಚುವ ಕಾರ್ಯ ಸರಿಯಲ್ಲ ಎಂದು ಮಾವಳ್ಳಿ ಶಂಕರ್ ತಿಳಿಸಿದರು.
ಸಂಸತ್ತಿನಲ್ಲಿ ಇತ್ತೀಚೆಗೆ ನಡೆದ ಘಟನೆಯನ್ನು ಯಾರು ಒಪ್ಪಲ್ಲ. ಆದರೆ ಅವರು ಎತ್ತಿರುವ ಪ್ರಶ್ನೆಗೆ ಸರ್ವಾಧಿಕಾರ, ನಿರುದ್ಯೋಗದ ಪ್ರಶ್ನೆಗೆ ಆಳುವ ವರ್ಗ ಉತ್ತರ ಕೊಡಬೇಕಾಗಿದೆ. ನಿರುದ್ಯೋಗ ಸಮಸ್ಯೆಯನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು.
ಖರ್ಗೆಗೆ ಅವಕಾಶ ನೀಡಿ
ಇಂಡಿಯಾ ಒಕ್ಕೂಟವು ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿ ಮಾಡುವ ನಡೆಯನ್ನು ನಾವು ಸ್ವಾಗತಿಸುತ್ತೇವೆ. ಖರ್ಗೆಯವರು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸಚಿವ ರಾಗಿ ಅವರಿಗೆ ಸಾಕಷ್ಟು ಅನುಭವ ಇದೆ. ಆದುದರಿಂದ ಅವರಿಗೆ ಅವಕಾಶ ಕೊಡಬೇಕು ಎಂದು ಅಭಿಪ್ರಾಯಪಟ್ಟರು.
ದೇಶ ಇಂದು ಕವಾಲು ದಾರಿಯಲ್ಲಿದೆ. ಸಂವಿಧಾನದ ಆಶಯಗಳನ್ನು ನಿಷ್ಕ್ರೀಯಗೊಳಿಸುವ ವ್ಯವಸ್ಥಿತವಾದ ಪಿತೂರಿ ಕೂಡ ನಡೆಯುತ್ತಿದೆ. ಅದೇ ರೀತಿ ಸ್ವಾತಂತ್ರ್ಯ ದೊರೆತ 73ವರ್ಷಗಳಾದರೂ ದೇಶದ ತಳ ಸಮುದಾಯದಲ್ಲಿ ಆತ್ಮ ವಿಶ್ವಾಸ ಮತ್ತು ಘನತೆಯ ಬದುಕು ಕೊಡುವಲ್ಲಿ ನಮ್ಮ ಎಲ್ಲ ರಾಜಕೀಯ ಪಕ್ಷಗಳು ಸೋತಿವೆ. ಇದೀಗ ಕೇಂದ್ರ ಸರಕಾರ ರೈತ ಹಾಗೂ ಕಾರ್ಮಿಕರ ವಿರೋಧಿ ನೀತಿಗಳನ್ನು ಜಾರಿ ತರುತ್ತಿದೆ. ಸಂವಿಧಾನದ ಒಂದೊಂದೇ ಆಶಯ ಗಳನ್ನು ತಿರುಚುವ ಪ್ರಯತ್ನ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ದಸಂಸ ಮುಖಂಡರಾದ ಸುಂದರ ಮಾಸ್ತರ್, ನಾಗಣ್ಣ ಬಡಿಗೇರ್, ಮಲ್ಲೇಶ್ ಅಂಬುಗ, ಮಂಜುನಾಥ್ ಗಿಳಿಯಾರು, ವಸಂತಿ ಶಿವಾನಂದ, ವಾಸುದೇವ ಮುದೂರು, ಶ್ಯಾಮ್‌ರಾಜ್ ಬಿರ್ತಿ ಮೊದಲಾದವರು ಉಪಸ್ಥಿತರಿದ್ದರು.
‘ಪೇಜಾವರ ಸ್ವಾಮೀಜಿ ರಾಮಮಂದಿರ ಆಯಿತು, ಇನ್ನೂ ರಾಮರಾಜ್ಯ ಮಾಡುವುದು ನಮ್ಮ ಕನಸು ಎಂದು ಹೇಳುತ್ತಿದ್ದಾರೆ. ನಾವು ಎಲ್ಲರು ಈ ದೇಶದಲ್ಲಿ ಸಂವಿಧಾನದಡಿಯಲ್ಲಿ ಬದುಕುತ್ತಿದ್ದೇವೆ. ನಮಗೆ ಬೇಕಾಗಿರುವುದು ಸಂವಿಧಾನಾತ್ಮಕವಾದ ದೇಶ. ಇಲ್ಲಿ ಎಲ್ಲ ಜಾತಿ ಧರ್ಮದವರು ಬದುಕುತ್ತಿದ್ದಾರೆ. ಈ ದೇಶವನ್ನು ಐಕ್ಯತೆಯನ್ನಾಗಿ ಇಟ್ಟಿರುವುದು ನಮ್ಮ ಸಂವಿಧಾನ. ಆ ಸಂವಿಧಾನ ಆಶಯವನ್ನು ಸಮಾಜಕ್ಕೆ ಕೊಡಬೇಕೆ ಹೊರತು ಮಹಾಕಾವ್ಯವನ್ನಲ್ಲ. ಈ ಮಾತುಗಳು ಸ್ವಾಮೀಜಿಗೆ ಶೋಭೆ ತರುವುದಿಲ್ಲ’
-ಮಾವಳ್ಳಿ ಶಂಕರ್, ಪ್ರಧಾನ ಸಂಚಾಲಕರು, ದಸಂಸ ಅಂಬೇಡ್ಕರ್ ವಾದ







