ಹಳೆಯ ತಾಲೂಕು ಕಚೇರಿ ಕಟ್ಟಡ ಅನ್ಯ ಇಲಾಖೆಗೆ ನೀಡುವ ಪ್ರಸ್ತಾಪಕ್ಕೆ ಉಡುಪಿ ವಕೀಲರ ಸಂಘ ವಿರೋಧ; ಕಂದಾಯ ಸಚಿವರಿಗೆ ಮನವಿ

ಉಡುಪಿ, ಡಿ.31: ಬನ್ನಂಜೆಯಲ್ಲಿರುವ ಉಡುಪಿ ತಾಲೂಕು ಆಡಳಿತ ಸೌಧ -ಮಿನಿ ವಿಧಾನಸೌಧ- ಕಟ್ಟಡದ ಪ್ರದೇಶ ದ್ವಾರದಲ್ಲಿರುವ ಹಳೆಯ ತಾಲೂಕು ಕಚೇರಿ ಕಟ್ಟಡವನ್ನು ಇತರ ಯಾವುದೇ ಇಲಾಖೆಗೆ ನೀಡುವ ಪ್ರಸ್ತಾಪವನ್ನು ಕೈಬಿಟ್ಟು, ಆ ಕಟ್ಟಡವನ್ನು ಕೆಡವಿ ಅಲ್ಲಿ ಪ್ರವೇಶ ದ್ವಾರ ಹಾಗೂ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸುವಂತೆ ಉಡುಪಿ ವಕೀಲರ ಸಂಘ ರಾಜ್ಯ ಕಂದಾಯ ಸಚಿವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದೆ.
ಬನ್ನಂಜೆಯಲ್ಲಿ 2020ರ ಜ.8ರಂದು ಉದ್ಘಾಟನೆಗೊಂಡ ಮಿನಿ ವಿಧಾನಸೌಧದಲ್ಲಿ ಕಂದಾಯ ಇಲಾಖೆಯ ಪ್ರಮುಖ ಕಚೇರಿಗಳೊಂದಿಗೆ ಭೂ ನ್ಯಾಯಮಂಡಳಿ, ಸಹಾಯಕ ಕಮಿಷನರ್ ನ್ಯಾಯಾಲಯ ಹಾಗೂ ಕಂದಾಯ ನಿರೀಕ್ಷಕರ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಇತ್ತೀಚೆಗೆ ಹಿರಿಯ ಉಪ ನೊಂದಣಾಧಿಕಾರಿಗಳ ಕಚೇರಿ ಕೂಡಾ ಅಲ್ಲಿಗೆ ಸ್ಶಳಾಂತರ ಗೊಂಡಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಹಳೆಯ ತಾಲೂಕು ಕಚೇರಿಯಿಂದ ಎಲ್ಲಾ ವಿಭಾಗಗಳು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಗೊಂಡ ನಂತರವೂ ಅದಕ್ಕೆ ನೇರ ಪ್ರವೇಶ ದ್ವಾರ ವಾಗಲೀ, ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ಸೂಕ್ತ ವಾಹನ ನಿಲುಗಡೆ ಗೆ ಪಾರ್ಕಿಂಗ್ ವ್ಯವಸ್ಥೆಯಾಗಲಿ ಇರುವುದಿಲ್ಲ. ಮುಖ್ಯ ರಸ್ತೆಯಿಂದ ಅದು ಸಾರ್ವಜನಿಕರಿಗೆ ಕಾಣಿಸುವುದೂ ಇಲ್ಲ ಎಂದು ವಿವರಿಸಲಾಗಿದೆ.
ಹೀಗಾಗಿ ಉದ್ಘಾಟನೆಗೊಂಡ ನಾಲ್ಕು ವರ್ಷ ಕಳೆದರೂ ಮಿನಿ ವಿಧಾನಸೌಧ ಮೂಲಭೂತ ಸೌಕರ್ಯಗಳಿಂದ ವಂಚಿತ ವಾಗಿದೆ. ಜನರಿಗೆ ಇದರಿಂದ ತೊಂದರೆಯಾಗುತ್ತಿದೆ.ಇದೀಗ ಹಳೆ ಕಟ್ಟಡವನ್ನು ಬಂದರು ಮತ್ತು ಮೀನು ಗಾರಿಕಾ ಇಲಾಖೆಗೆ ನೀಡುವ ಪ್ರಸ್ತಾಪವಿದೆ ಎಂದು ತಿಳಿದುಬಂದಿದೆ ಎಂದು ವಕೀಲರ ಸಂಘ ಮನವಿಯಲ್ಲಿ ಹೇಳಿದೆ.
ದೂರದೃಷ್ಟಿಯಿಲ್ಲದ ಇಂತಹ ತಾತ್ಕಾಲಿಕ ವ್ಯವಸ್ಥೆಯಿಂದ ಉಡುಪಿಯ ನೂತನ ಆಡಳಿತ ಸೌಧದ ಮೂಲ ಉದ್ದೇಶ ವಿಫಲ ವಾಗುತ್ತದೆ. ಈ ಪ್ರಸ್ತಾಪವನ್ನು ಉಡುಪಿ ವಕೀಲರ ಸಂಘ ತೀವ್ರವಾಗಿ ಆಕ್ಷೇಪಿಸುತ್ತದೆ. ಇದನ್ನು ಜಿಲ್ಲಾಡಳಿತ ಕೈಬಿಡದೇ ಇದ್ದರೆ, ವಕೀಲರ ಸಂಘವು ಸಾರ್ವಜನಿಕರೊಂದಿಗೆ ಸೇರಿ ಪ್ರತಿಭಟನೆಯನ್ನು ನಡೆಸುವುದು ಅನಿವಾರ್ಯವಾಗುವುದು ಎಂದು ತಿಳಿಸಲಾಗಿದೆ.
ಆದುದರಿಂದ ಮಿನಿ ವಿಧಾನಸೌಧ ಮುಂಭಾಗದಲ್ಲಿರುವ ಹಳೆಯ ತಾಲೂಕು ಕಟ್ಟಡವನ್ನು ಯಾವುದೇ ಕಚೇರಿಗಳಿಗೂ ನೀಡದೇ ಅದನ್ನು ಕೆಡವಿ ಅಲ್ಲಿ ಸುಂದರ ಪ್ರವೇಶ ದ್ವಾರ, ಸುಸಜ್ಜಿತ ವಾಹನ ನಿಲುಗಡೆ ವ್ಯವಸ್ಥೆ, ಉಪಹಾರ ಗೃಹ ಹಾಗೂ ಇತರ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಜಿಲಾಡಳಿತಕ್ಕೆ ಸೂಚಿಸಬೇಕು ಎಂದು ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.
ಕಂದಾಯ ಸಚಿವರಿಗೆ ಸಲ್ಲಿಸಿದ ಮನವಿಯ ಪ್ರತಿಯನ್ನು ವಕೀಲರ ಸಂಘದ ನಿಯೋಗವು ಜಿಲ್ಲಾಧಿಕಾರಿಗಳನ್ನು ಭೇಟಿ ಯಾಗಿ ನೀಡಿತು. ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ನಿಯೋಗದಲ್ಲಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್, ಉಪಾಧ್ಯಕ್ಷ ಮಿತ್ರ ಕುಮಾರ್ ಶೆಟ್ಟಿ, ಜಂಟಿ ಕಾರ್ಯದರ್ಶಿ ರವೀಂದ್ರ ಬೈಲೂರ್, ಹಿರಿಯ ವಕೀಲರಾದ ಮಟ್ಟಾರು ರತ್ನಾಕರ ಹೆಗ್ಡೆ, ಎ. ಸಂಜೀವ, ಟಿ. ವಿಜಯ ಕುಮಾರ ಶೆಟ್ಟಿ, ಕಳತ್ತೂರು ಉಮೇಶ್ ಶೆಟ್ಟಿ, ಮೋಹನದಾಸ್ ಶೆಟ್ಟಿ, ವಿಲ್ಫ್ರೆಡ್ ಡಿ’ಮೆಲ್ಲೋ, ಜೆ.ಕೆ. ಆಳ್ವ, ಸುಕೇಶ್ ಶೆಟ್ಟಿ, ರಮೇಶ್ ಶೆಟ್ಟಿ, ಬಾಲಚಂದ್ರ, ಆನಂದ ಮಡಿವಾಳ, ರಾಘವೇಂದ್ರ ಶೆಟ್ಟಿ, ಅಮೃತಕಲ, ನಾಗರತ್ನ ನಾಯ್ಕ್, ಶಿಲ್ಪ ಮುಂತಾದವರು ಉಪಸ್ಥಿತರಿದ್ದರು.







