ಅಖಿಲ ಭಾರತ ಅಂತರ ವಿವಿ ಬಾಕ್ಸಿಂಗ್‌ಗೆ ಮಾಹೆಯ ನಮನ್ ಭಟ್ ತೇರ್ಗಡೆ

ಮಣಿಪಾಲ, ಡಿ.31: ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಮಣಿಪಾಲದ ಬಾಕ್ಸರ್ ನಮನ್ ಭಟ್ ಅವರು ಜನವರಿ 2ರಿಂದ 5ರವರೆಗೆ ಪಂಜಾಬ್‌ನ ಚಂಡೀಗಢ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಡೆಯುವ ಅಖಿಲ ಭಾರತ ಅಂತರ ವಿವಿ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ.
ನಮನ್ ಭಟ್ ಅವರು ನೈಋತ್ಯ ವಲಯ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ 67-71 ಕೆ.ಜಿ. ವಿಭಾಗದಲ್ಲಿ ಜಯಗಳಿಸುವ ಮೂಲಕ ಅಖಿಲ ಭಾರತ ಅಂತರ ವಿವಿ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸುವ ಅರ್ಹತೆ ಪಡೆದು ಕೊಂಡಿದ್ದಾರೆ.
ನಾಲ್ಕನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ನಮನ್ ಭಟ್, ದಸರಾ ರಾಜ್ಯ ಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರೆ, ಮಾಹೆ ವಿವಿ ಮಟ್ಟದಲ್ಲಿ ಚಾಂಪಿಯನ್ ಆಗಿ ನೈಋತ್ಯ ವಲಯ ವಿವಿ ಸ್ಪರ್ಧೆಯಲ್ಲಿ ಮಾಹೆಯನ್ನು ಪ್ರತಿನಿಧಿಸುವ ಅರ್ಹತೆ ಪಡೆದಿದ್ದರು.
ನಮನ್ ಭಟ್ ಅವರ ಈ ಸಾಧನೆಗೆ ಮಾಹೆ ವಿವಿಯ ಕುಲಪತಿಗಳಾದ ಲೆ.ಜ.ಡಾ.ಎಂ.ಡಿ.ವೆಂಕಟೇಶ್ ಹಾಗೂ ಎಂಐಟಿಯ ನಿರ್ದೇಶಕ ಕ.ಡಾ. ಅನಿಲ್ ರಾಣಾ ಅವರು ಹರ್ಷ ವ್ಯಕ್ತಪಡಿಸಿದ್ದು, ಅಂತಿಮ ಸುತ್ತಿನಲ್ಲಿ ಉತ್ತಮ ಸಾಧನೆ ತೋರಲಿ ಎಂದು ಹಾರೈಸಿದ್ದಾರೆ.







