ಅಯೋಧ್ಯೆ ಚಳುವಳಿಯಲ್ಲಿ ಭಾಗವಹಿಸಿದ್ದ ವ್ಯಕ್ತಿಯನ್ನು ಬಂಧಿಸಿದ್ದು ಖಂಡನೀಯ: ಕೋಟ ಶ್ರೀನಿವಾಸ್ ಪೂಜಾರಿ

ಉಡುಪಿ: 31 ವರ್ಷಗಳ ಹಿಂದೆ ಅಯೋಧ್ಯ ಶ್ರೀರಾಮ ಮಂದಿರದ ಚಳುವಳಿಯಲ್ಲಿ ಭಾಗವಹಿಸಿದ್ದ ಎಂಬ ಒಂದೇ ಕಾರಣಕ್ಕೆ ಒಬ್ಬ ಕಾರ್ಮಿಕನನ್ನು ರಾಜ್ಯ ಸರಕಾರ ಬಂಧಿಸಿದ್ದು, ಇದು ಖಂಡನೀಯ ಎಂದು ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕನಾಗಿ ನೇಮಕಗೊಂಡಿರುವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು 31 ವರ್ಷಗಳ ಹಿಂದಿನ ಕೇಸ್‌ನಲ್ಲಿ ಒಬ್ಬ ವೃದ್ಧನನ್ನು ನೀವು ಬಂಧಿಸಿದ್ದೀರಿ. ಸಿದ್ದರಾಮಯ್ಯನವರೇ, ಅವರಿಗೆ ಈಗ ನಿಮ್ಮ ತಂದೆಯ ಪ್ರಾಯ ಆಗಿರಬಹುದು. ನಿಮ್ಮ ಸರಕಾರದ ಮಾನಸಿಕತೆ ಏನು ಎಂಬುದು ಇದರಿಂದ ಗೊತ್ತಾಗುತ್ತದೆ ಎಂದರು.
ಇಡೀ ದೇಶವೇ ರಾಮಮಂದಿರ ನಿರ್ಮಾಣಗೊಂಡ ಖುಷಿಯಲ್ಲಿದ್ದರೆ ನೀವು ರಾಮಮಂದಿರ ಚಳುವಳಿಯಲ್ಲಿ ಭಾಗವಹಿಸಿದ್ದ ಎಂಬ ಒಂದೇ ಕಾರಣಕ್ಕೆ ಆ ವ್ಯಕ್ತಿಯನ್ನು ಬಂಧಿಸಿದ್ದು ಕ್ರೂರ ನಡೆ. ಇದನ್ನು ಬಿಜೆಪಿ ಪಕ್ಷ ಖಂಡಿಸುತ್ತದೆ ಎಂದು ಕೋಟ ಹೇಳಿದ್ದಾರೆ.
ಯತ್ನಾಳ್ ಹೇಳಿಕೆ: ಕೊರೋನ ಸಂದರ್ಭದಲ್ಲಿ ರಾಜ್ಯದ ಯಡಿಯೂರಪ್ಪ ನೇತೃತ್ವದ ಸರಕಾರ 40,000 ಕೋಟಿ ರೂ. ಭ್ರಷ್ಟಾಚಾರ ನಡೆಸಿದೆ ಎಂಬ ಬಿಜೆಪಿಯ ಹಿರಿಯ ನಾಯಕ ಯತ್ನಾಳ್ ಅವರ ಹೇಳಿಕೆ ಕುರಿತು ಪ್ರಶ್ನಿಸಿದಾಗ, ಇದು ಕೇಂದ್ರ ನಾಯಕರ ಹಂತದಲ್ಲಿ ಚರ್ಚೆಯಲ್ಲಿದೆ. ಕೇಂದ್ರ ನಾಯಕರು ಅವರನ್ನು ಕರೆದು ಬುದ್ದಿ ಹೇಳ್ತಾರೆ ಎಂದು ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.
ಯತ್ನಾಳ್ ಆರೋಪದಲ್ಲಿ ಹುರುಳು ಇದೆಯಾ ತಿರುಳು ಇದೆಯಾ ಎಂಬುದು ಹೇಳಿಕೆ ನೀಡಿದವರಿಗೇ ಗೊತ್ತು. ಅದನ್ನು ಕೇಂದ್ರದ ನಾಯಕರು ಗಮನಿಸಿದ್ದಾರೆ. ಈ ಹಂತದಲ್ಲಿ ಅದಕ್ಕೆ ಹೆಚ್ಚು ಪ್ರತಿಕ್ರಿಯೆ ಕೊಡುವುದಿಲ್ಲ. ಅವರ ಹೇಳಿಕೆಯಿಂದ ಪಕ್ಷಕ್ಕೆ ಇರುಸುಮುರುಸು ಆಗಿರುವುದು ನಿಜ. ಆದರೆ ಈ ಹಂತದಲ್ಲಿ ನಾವು ಪ್ರತಿಕ್ರಿಯೆ ನೀಡಿ ಮತ್ತಷ್ಟು ಇರುಸುಮುರುಸು ಉಂಟುಮಾಡಬಾರದು ಎಂದು ಪಕ್ಷ ನಿರ್ಧಾರ ಮಾಡಿದೆ ಎಂದು ಕೋಟ ತಿಳಿಸಿದರು.







