ಗೆಲುವಿನಷ್ಟೇ ಸೋಲನ್ನು ಸ್ವೀಕರಿಸುವ ಮನೋಸ್ಥೈರ್ ಅಗತ್ಯ: ದಿನೇಶ್ ಹೆಗ್ಡೆ

ಉಡುಪಿ : ಯುವ ವಕೀಲರಿಗೆ ಪ್ರಕರಣಗಳಲ್ಲಿನ ಗೆಲುವನ್ನು ಸಂಭ್ರಮಿಸುವುದಷ್ಟೇ ಅಲ್ಲದೇ, ಸೋಲನ್ನು ಸ್ವೀಕರಿಸುವ ಮನೋಸ್ಥೈರ್ ಸಹ ಆವಶ್ಯಕವಾಗಿದೆ. ಇದಕ್ಕಾಗಿ ಅವರು ನ್ಯಾಯಾಧೀಶರ ಸ್ಥಾನದಲ್ಲಿ ನಿಂತು ಯೋಚಿಸಬೇಕಾದ ಅಗತ್ಯವಿದೆ ಎಂದು ಉಡುಪಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ದಿನೇಶ್ ಹೆಗ್ಡೆ ಅವರು ಕಾನೂನು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.
ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿಗಳ 2023-24ನೇ ಸಾಲಿನ ಕಾರ್ಯಕಾರಿ ಸಂಘವನ್ನು ಇಂದು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ವಿದ್ಯಾರ್ಥಿಗಳು ಕಾನೂನಿನ ಯಾವುದೇ ಒಂದು ವಿಷಯದ ಮೇಲೆ ಪರಿಣಿತಿ ಹೊಂದಬೇಕಾದರೆ ಅದಕ್ಕೆ ಸಂಬಂಧಿಸಿದಂತೆ ಗ್ರಂಥಾಲಯದಲ್ಲಿನ ಪುಸ್ತಕಗಳು ಮತ್ತು ಇನ್ನಿತರ ಮೂಲಗಳಿಂದ ಮಾಹಿತಿ ತಿಳಿದುಕೊಳ್ಳಬೇಕು ಹಾಗೂ ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸಿ ಹಿರಿಯ ನ್ಯಾಯವಾದಿ ಗಳು ವಾದ ಮಂಡಿಸುವಾಗ ಸೂಕ್ಷ್ಮವಾಗಿ ಗಮನಹರಿಸುವುದರ ಮೂಲಕ ವೃತ್ತಿ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜಿನ ನಿರ್ದೇಶಕಿ ಪ್ರೊ.(ಡಾ.) ನಿರ್ಮಲ ಕುಮಾರಿ ಕೆ. ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಪ್ರೊ. ರಘುನಾಥ್ ಕೆ.ಎಸ್., ಪೋಷಕ ಶಿಕ್ಷಕ ಸಂಘದ ಅಧ್ಯಕ್ಷೆ ಕಿರಣ್ ವಿನುತ ಹರೀಶ್, ವಿದ್ಯಾರ್ಥಿ ಕ್ಷೇಮಾಧಿಕಾರಿ ಸುರೇಖಾ ಕೆ. ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ಸಂಚಾಲಕಿ ಪ್ರೀತಿ ಹರೀಶ್ ರಾಜ್, ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿ ದೀಕ್ಷಿತ್ ಸ್ವಾಗತಿಸಿ, ಪ್ರವೀಣಾಬಾಬು ವಂದಿಸಿದರು. ಮರಿಯಾ ತೆರೆಸಾ ಕಾರ್ಯಕ್ರಮ ನಿರೂಪಿಸಿದರು.
ಕಾಲೇಜಿನ ವಿದ್ಯಾರ್ಥಿ ಸಂಘಕ್ಕೆ 3 ವರ್ಷಗಳ ಎಲ್.ಎಲ್.ಬಿ ಕೋರ್ಸ್‌ಗೆ ಲೋಹಿತ್ ಹಾಗೂ 5 ವರ್ಷಗಳ ಬಿ.ಎ.ಎಲ್.ಎಲ್.ಬಿ ಕೋರ್ಸ್‌ಗೆ ಸಂಬಂಧಿಸಿದಂತೆ ಅಪೂರ್ವ ಶೆಟ್ಟಿ ಅದ್ಯಕ್ಷರಾಗಿ ಆಯ್ಕೆಯಾದರು. ಇತರ ಪದಾಧಿಕಾರಿಗಳ ಪದಗ್ರಹಣವೂ ಇದೇ ವೇಳೆ ನಡೆಯಿತು.







