ಧೀಮಂತ ಚೇತನಗಳನ್ನು ನೆನೆದುಕೊಳ್ಳಬೇಕಾದುದು ನಮ್ಮ ಹೊಣೆ: ಮಂಜುನಾಥ್ ಗಿಳಿಯಾರು
ಸಾವಿತ್ರಿ ಬಾಪುಲೆ ಜನ್ಮ ದಿನಾಚರಣೆ

ಉಡುಪಿ: ಸೀಮಿತವಾಗಿಯಾದರೂ ಸಮಾನತೆ ಹಾಗೂ ಸಮಾನ ಅವಕಾಶಗಳೊಂದಿಗೆ ನಮ್ಮ ಹಿರೀಕರಿಗಿಂತ ಭಿನ್ನ ವಾಗಿ ಅಕ್ಷರ ಲೋಕದ ಒರತೆಯನ್ನು ಎದೆಗಿಳಿಸಿಕೊಳ್ಳುತ್ತಾ ಕೂಡಿಬಾಳಲು ಸಾಧ್ಯವಾದ ಈ ವರ್ತಮಾನದ ಬದುಕು ಹಾಗೂ ಸಾಮಾಜಿಕ ಸುಸ್ಥಿತಿಯ ಹಿಂದಿನ ಕಾರಣ ಮತ್ತು ಕಾರಣಿಕರಾದ ಧೀಮಂತ ಚೇತನಗಳನ್ನು ನಾನವು ನೆನೆಪಿಸಿ ಕೊಳ್ಳ ಬೇಕಾಗಿರುವುದು ನಮ್ಮ ಹೊಣೆ ಎಂದು ದಲಿತ ನಾಯಕ ಹಾಗೂ ನ್ಯಾಯವಾದಿ ಮಂಜುನಾಥ್ ಗಿಳಿಯಾರು ಹೇಳಿದ್ದಾರೆ.
ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ಘಟಕಗಳ ಸಹಯೋಗದಲ್ಲಿ ನಡೆದ ‘ಅರಿವಿನ ತಾಯಿ ಸಾವಿತ್ರಿ ಬಾಪುಲೆ’ ಅವರ ಜನ್ಮದಿನಾಚರಣೆ ಕಾರ‌್ಯಕ್ರಮದಲ್ಲಿ ಸಾವಿತ್ರಿ ಬಾಪುಲೆ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಈ ನಿಟ್ಟಿನಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ಅಕ್ಷರದ ಅವ್ವ, ಅರಿವಿನ ತಾಯಿ, ಈ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಪುಲೆ ಹಾಗೂ ಅವರ ಒಡನಾಡಿ ಮೊದಲ ಮುಸ್ಲಿಂ ಶಿಕ್ಷಕಿ ಫಾತಿಮಾ ಶೇಖ್ ತರಹದ ಧೀಮಂತ ಚೇತನಗಳನ್ನು ಅರ್ಥಪೂರ್ಣವಾಗಿ ನೆನೆದುಕೊಳ್ಳುತ್ತಾ ವೈಚಾರಿಕವೂ, ಮಾನವೀಯವೂ ಆದ ಭವಿಷ್ಯದ ಸಮಾಜವನ್ನು ಕಟ್ಟಿ ಕೊಳ್ಳುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಮಂಜುನಾಥ್ ಗಿಳಿಯಾರು ಅಭಿಪ್ರಾಯಪಟ್ಟರು.
ಸ್ವಾಗತದೊಂದಿಗೆ ಪ್ರಾಸ್ತಾವಿಕ ಮಾತುಗಳನ್ನಾಡಿದ ಕನ್ನಡ ವಿಭಾಗ ಮುಖ್ಯಸ್ಥ ಪ್ರೊ. ಜಯಪ್ರಕಾಶ್ ಶೆಟ್ಟಿ, ಅಕ್ಷರವಿಲ್ಲದ ಅನಂತ ಕತ್ತಲೆಯಲ್ಲಿ ಅಳಿದು ಹೋದ ಅಸಂಖ್ಯ ಶಂಭೂಕ ಸರಣಿಯ ಕೊಂಡಿಗಳು ಕಳಚಿಕೊಂಡ ಹೊಸಕಾಲದ ಅರಿವಿನ ಫಲಾನುಭವಿಗಳಾದ ಯುವಮನಸ್ಸುಗಳು ಪುಲೆ ದಂಪತಿಗಳ ಬದುಕಿನ ಹೋರಾಟದ ಚರಿತ್ರೆಯನ್ನು ಎಚ್ಚರದಿಂದಲೇ ನೆನೆಯಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಸುರೇಶ್ ರೈ ಕೆ. ಅಧ್ಯಕ್ಷತೆ ವಹಿಸಿದ್ದ ಕಾರ‌್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕಿ ಡಾ. ಮೇವಿ ಮಿರಾಂದ ಉಪಸ್ಥಿತರಿದ್ದರು.
ಸಂವಿಧಾನದ ಪೀಠಿಕೆಯ ಓದಿನೊಂದಿಗೆ ಆರಂಭವಾದ ಕಾರ‌್ಯಕ್ರಮದಲ್ಲಿ ಉಪನ್ಯಾಸಕಿ ಶರೀತಾ ವಂದಿಸಿ, ಸಹಾಯಕ ಪ್ರಾಧ್ಯಾಪಕಿ ರತ್ನಮಾಲಾ ನಿರೂಪಿಸಿದರು.







