ಸಾವಿತ್ರಿ ಬಾಪುಲೆ ಮಹಿಳೆಯರ, ಶೋಷಿತರ ಬೆಳಕು: ಶ್ಯಾಮರಾಜ್ ಬಿರ್ತಿ

ಬ್ರಹ್ಮಾವರ, ಜ.5: ತೆಂಕು ಬಿರ್ತಿ ಅಂಬೇಡ್ಕರ್ ಯುವಕ ಮಂಡಲ ಮತ್ತು ಸಾವಿತ್ರಿ ಬಾಯಿಪುಲೆ ಗ್ರಂಥಾಲಯದ ಜಂಟಿ ಆಶ್ರಯದಲ್ಲಿ ಸಾವಿತ್ರಿ ಬಾಯಿ ಪುಲೆ ಅವರ ಜನ್ಮದಿನಾಚರಣೆಯನ್ನು ಅಕ್ಷರದವ್ವನ ಅರಿವು ಶೀರ್ಷಿಕೆಯಡಿ ಬಿರ್ತಿಯ ಅಂಬೇಡ್ಕರ್ ಭವನದಲ್ಲಿ ಗುರುವಾರ ಆಚರಿಸಲಾಯಿತು.
ಕಾರ್ಯಕ್ರಮವನ್ನು ಬ್ಯಾಂಕ್ ಆಫ್ ಬರೋಡದ ಪ್ರಬಂಧಕ ಸುಬ್ರಹ್ಮಣ್ಯ ಪ್ರಸಾದ್ ಉಧ್ಘಾಟಿಸಿದರು. ಮುಖ್ಯ ಅತಿಥಿಯಾಗಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಮಾತನಾಡಿ, ಸಾವಿತ್ರಿ ಬಾಯಿಪುಲೆಯವರು ಭಾರತದ ಮಹಿಳೆಯರ ಮತ್ತು ಅಸ್ಪೃಶ್ಯರ ಪಾಲಿನ ಬೆಳಕು ಎಂದು ಹೇಳಿದರು.
ಭಾರತದಲ್ಲಿ ಮಹಿಳೆಯರಿಗೆ ಮತ್ತು ಅಸ್ಪೃಶ್ಯರಿಗೆ ಶಿಕ್ಷಣ ನಿಷೇಧ ಇದ್ದ 1831 ರಲ್ಲಿ ಹುಟ್ಟಿದ ಸಾವಿತ್ರಿ ಬಾಯಿಪುಲೆ ಸಮಾಜ ದಲ್ಲಿ ಸಾಕಷ್ಟು ವಿರೋಧವಿದ್ದರೂ ಅವಮಾನ ಅನುಭವಿಸಿ ಮಹಿಳೆಯರಿಗೆ ಮತ್ತು ಅಸ್ಪೃಶ್ಯರಿಗೆ ವಿಶೇಷ ಶಾಲೆಯನ್ನು ತೆರೆದು ಶಿಕ್ಷಣ ಕೊಟ್ಟರು. ಮೇಲ್ವರ್ಗದವರಿಂದ ಜಾತಿವಾದಿಗಳಿಂದ ಶಾಲೆಗೆ ಹೋಗುವಾಗ ಮತ್ತು ಬರುವಾಗ ಕೆಸರು, ಸೆಗಣಿಯ ಹೊಡೆತ ತಿಂದೂ ಧೃತಿಗೆಡದೇ ಶಿಕ್ಷಣ ವಂಚಿತರ ಪಾಲಿಗೆ ಜ್ಞಾನ ಧೀವಿಗೆಯಾದರು ಎಂದರು.
ಯುವಕ ಮಂಡಲದ ಮಾಜಿ ಅಧ್ಯಕ್ಷ ಹರೀಶ್ಚಂದ್ರ ಕೆ.ಡಿ., ಕೆನರಾ ಬ್ಯಾಂಕ್‌ನ ಶಿವಾನಂದ ಬಿರ್ತಿ, ಕಿಶನ್ ಕುಮಾರ್, ಸ್ವರಾಜ್ ಬಿರ್ತಿ ಉಪಸ್ಥಿತರಿದ್ದರು. ಪ್ರಶಾಂತ್ ಬಿರ್ತಿ ಸ್ವಾಗತಿಸಿದರು. ಅನಿಲ್ ಬಿರ್ತಿ ವಂದಿಸಿದರು.







