ಅಹಿಂದ ಸಮುದಾಯಗಳ ಒಗ್ಗಟ್ಟಿನ ಹೋರಾಟ ಇಂದಿನ ಅಗತ್ಯ: ಚಿಂತಕ ಶಿವಸುಂದರ್

ಉಡುಪಿ: ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿ ಜನ ವಿರೋಧಿ ಕಾನೂನುಗಳನ್ನು ಜಾರಿಗೆ ತಂದು ದೇಶದ ನಾಗರಿಕರ ಬದಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಸರಕಾರಗಳ ವಿರುದ್ಧ ದೇಶದ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ದಲಿತರು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಆ ರೀತಿ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಈ ದೇಶದ ದಲಿತ ದಮನಿತ ಅಲ್ಪಸಂಖ್ಯಾತರು ಎರಡನೆ ದರ್ಜೆಯ ಪ್ರಜೆಗಳಾಗಬಹುದೆಂದು ಚಿಂತಕ ಶಿವಸುಂದರ್ ಹೇಳಿದ್ದಾರೆ.
ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಸಮಿತಿಯು ಕಟಪಾಡಿಯ ಚೊಕ್ಕಾಡಿ ನೂರುಲ್ ಇಸ್ಲಾಂ ಹನಫೀ ಜಾಮಿಯ ಮಸೀದಿಯ ವಠಾರದಲ್ಲಿ ಹಮ್ಮಿಕೊಂಡ ಬದಲಾಗುತ್ತಿರುವ ಭಾರತ ಮತ್ತು ನಾಗರಿಕ ಸಮಾಜದ ಮುಂದಿರುವ ಸವಾಲುಗಳು ಕುರಿತ ವಿಚಾರ ಸಂಕಿರಣವನ್ನು ಉದ್ದೇಶಿಸಿ ಅವರು ಮಾತನಾಡುತಿದ್ದರು.
2014ರ ನಂತರ ಈ ದೇಶದಲ್ಲಿ ನಡೆಯುತ್ತಿರುವ ತಾರತಮ್ಯ ನೀತಿಗಳು ಧರ್ಮ ಜಾತಿಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ನಾವೆಲ್ಲರೂ ಒಟ್ಟಾಗಿ ಪ್ರಯತ್ನಿಸಬೇಕೆಂದು ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಉಲಮಾ ಒಕ್ಕೂಟದ ಕೋಶಾಧಿಕಾರಿ ಅಬ್ದುಲ್ಲತೀಫ್ ಫಾಳಿಲಿ ನಾವುಂದ ಉದ್ಘಾಟಿಸಿ ದರು. ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾಧ್ಯಕ್ಷ ಬಿಎಸ್‌ಎಫ್ ಮುಹಮ್ಮದ್ ರಫೀಕ್ ಅಧ್ಯಕ್ಷತೆ ವಹಿಸಿದ್ದರು.
ಸುನ್ನಿ ಉಲಮಾ ಒಕ್ಕೂಟ, ಸುನ್ನಿ ಸಂಯುಕ್ತ ಜಮಾಅತ್, ಮುಸ್ಲಿಂ ಜಮಾಅತ್, ಎಸ್‌ವೈಎಸ್, ಎಸ್ಸೆಸ್ಸೆಫ್, ಎಸ್‌ಜೆಎಂ, ಎಸ್‌ಎಂಎ ಹಾಗೂ ಇನ್ನಿತರ ಸುನ್ನಿ ಸಂಘಟನೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಡ್ವೊಕೇಟ್ ಇಲ್ಯಾಸ್ ನಾವುಂದ ಸ್ವಾಗತಿಸಿದರು. ವೈಬಿಸಿ ಬಶೀರ್ ಆಲಿ ಮೂಳೂರು ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾನ್ ಅಹ್ಮದ್ ಹೊನ್ನಾಳ ವಂದಿಸಿದರು.







