ರಾಜ್ಯ ಸರಕಾರದಿಂದ ಆರೋಗ್ಯ ಸೇವೆಯ ಡಿಜಿಟಲೀಕರಣ: ಡಾ.ಆರತಿ ಕೃಷ್ಣ
ಮಣಿಪಾಲದಲ್ಲಿ ಜಾಗತಿಕ ಆರೋಗ್ಯ ಶೃಂಗಸಭೆ ಉದ್ಘಾಟನೆ

ಮಣಿಪಾಲ, ಜ.5: ರಾಜ್ಯ ಸರಕಾರವು ಆಸ್ಪತ್ರೆ ನಿರ್ವಹಣಾ ಮಾಹಿತಿ ವ್ಯವಸ್ಥೆಯನ್ನು ಅಳವಡಿಸುವ ಮೂಲಕ ಆರೋಗ್ಯ ಸೇವೆಯನ್ನು ಡಿಜಿಟಲೀಕರಣ ಗೊಳಿಸುತ್ತಿದೆ. ಅದೇ ರೀತಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಎಐ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆಯನ್ನು ಇಟ್ಟಿದೆ ಎಂದು ಕರ್ನಾಟಕ ಸರಕಾರದ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಹೇಳಿದ್ದಾರೆ.
ಭಾರತೀಯ ಸಂಜಾತ ಅಮೆರಿಕನ್ ವೈದ್ಯರ ಒಕ್ಕೂಟದ ವತಿಯಿಂದ ಮಣಿಪಾಲದ ವ್ಯಾಲಿವ್ಯೆ ಹೊಟೇಲ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾದ ಜಾಗತಿಕ ಆರೋಗ್ಯ ಶೃಂಗಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಐಟಿ ಮತ್ತು ಅವಿಷ್ಕಾರಗಳ ಕೇಂದ್ರವಾಗಿರುವ ಕರ್ನಾಟಕ ಇದೀಗ ಆರೋಗ್ಯ ಕ್ಷೇತ್ರದ ಬಗ್ಗೆಯೂ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಈ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸುವಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ ಎಂದ ಅವರು, ಆರೋಗ್ಯ ಕ್ಷೇತ್ರದ ಡಿಜಿಟಲೀಕರಣದಿಂದ ಆಡಳಿತಾಧಿಕಾರಿಗಳು ಹಾಗೂ ನಾಗರಿಕರಿಗೂ ಅನುಕೂಲವಾಗುತ್ತಿದೆ ಎಂದರು.
ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಹೊಸ ಆರೋಗ್ಯ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಗುರುತಿಸಲು, ಮೌಲ್ಯಮಾಪನ ಮಾಡಲು ರಾಜ್ಯವು ಆರೋಗ್ಯ ತಂತ್ರಜ್ಞಾನ ಆವಿಷ್ಕಾರ ಪ್ರಯೋಗಾಲಯವನ್ನು ಸ್ಥಾಪಿಸಲು ಸಿದ್ಧವಾಗಿದೆ. ಈ ಸೌಲಭ್ಯವು ಎಲ್ಲಾ ಆರೋಗ್ಯ ತಂತ್ರಜ್ಞಾನ ಸಂಬಂಧಿತ ಉಪ ಕ್ರಮಗಳಿಗೆ ಸಂಪರ್ಕ ಸಾಧಿಸಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ರಾಜ್ಯವು ಫಾರ್ಮಾ ಕಂಪೆನಿ, ಆರೋಗ್ಯ ಸಂಶೋಧನಾ ಕೇಂದ್ರ, ವೈದ್ಯಕೀಯ ಸಾಧನ ತಯಾರಿಕಾ ಕಂಪೆನಿ ಗಳ ಸ್ಥಾಪನೆಗೆ ಪ್ರೋತ್ಸಾಹಿಸಲು ಪೂರಕ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ. ಸಂಶೋಧನೆ ಮತ್ತು ಆವಿಷ್ಕಾರಕ್ಕೆ ಒತ್ತು ನೀಡುತ್ತಿರುವ ಕರ್ನಾಟಕ, ಆರೋಗ್ಯ ಸೇವಾ ಉದ್ಯಮದಲ್ಲಿ ಕ್ರಾಂತಿಯ ಹಾದಿಯಲ್ಲಿ ಈಗಾಗಲೇ ಕ್ಯೂಆರ್ ಕೋಡ್ ಆಧಾರಿತ ಸ್ಕ್ಯಾನ್ ಅನ್ನು ಪರಿಚಯಿಸಿದೆ ಎಂದು ಅವರು ಮಾಹಿತಿ ನೀಡಿದರು.
ರಾಜ್ಯದಾದ್ಯಂತ 218 ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ನೋಂದಣಿಗಾಗಿ ಫಾಸ್ಟ್ ಟ್ರ್ಯಾಕ್ ಕ್ಯೂ ವ್ಯವಸ್ಥೆಯನ್ನು ಸರಕಾರ ಆರಂಭಿಸಿದೆ. 2022ರಿಂದ ಆರಂಭ ಗೊಂಡ ಈ ತಂತ್ರಜ್ಞಾನವನ್ನು 11,27,795 ರೋಗಿಗಳು ಬಳಸಿಕೊಂಡಿ ದ್ದಾರೆ ಎಂದು ಅವರು ಹೇಳಿದರು.
ಮಣಿಪಾಲದ ಮಾಹೆಯ ಪ್ರೊ ಚಾನ್ಸೆಲರ್ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ನಮ್ಮ ದೇಶದಲ್ಲಿ ಶೇ.70ರಷ್ಟು ಮಂದಿ ಗ್ರಾಮೀಣ ಪ್ರದೇಶದಲ್ಲಿ ಬದುಕು ನಡೆಸುತ್ತಿದ್ದಾರೆ. ಇವರೆಲ್ಲ ಗುಣಮಟ್ಟದ ಆರೋಗ್ಯ ಸೇವೆಯಿಂದ ವಂಚಿತರಾಗುತ್ತಿದ್ದಾರೆ. ಇವರಿಗೆ ಉತ್ತಮ ಆರೋಗ್ಯ ಹಾಗೂ ಶಿಕ್ಷಣವನ್ನು ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.
ಇದೇ ವೇಳೆ ಪದ್ಮಭೂಷಣ ಪುರಸ್ಕೃತ ಮಾಹೆಯ ಮುಖ್ಯಸ್ಥ ಡಾ.ರಾಮದಾಸ್ ಪೈ ಅವರಿಗೆ ಜೀವಮಾನದ ಸಾಧನೆಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅವರ ಪರವಾಗಿ ಪ್ರಶಸ್ತಿಯನ್ನು ವಾಸಂತಿ ಪೈ ಹಾಗೂ ರಂಜನ್ ಪೈ ಸ್ವೀಕರಿಸಿದರು. ಒಕ್ಕೂಟದ ಅಧ್ಯಕ್ಷೆ ಡಾ.ಅಂಜನಾ ಸಮದ್ದಾರ್, ಯುಎಸ್‌ಎ ಜಿಎಚ್‌ಎಸ್ ಅಧ್ಯಕ್ಷ ಡಾ.ಸಂಪತ್ ಶಿವಂಗಿ, ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ.ವೆಂಕಟೇಶ್ ಉಪಸ್ಥಿತರಿದ್ದರು.
ಕೋಮಲ್ ಜೆನಿಫರ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಸಂಜೆ ಮಾನಸಿ ಸುಧೀರ್ ನೇತೃತ್ವದ ತಂಡದಿಂದ ಕಾವ್ಯಾಭಿನಯ ಪ್ರದರ್ಶನಗೊಂಡಿತು.







