ಪುರಪ್ರವೇಶಕ್ಕೆ ಉಸ್ತುವಾರಿ ಸಚಿವರ ಗೈರು: ಯಶ್ಪಾಲ್ ಸುವರ್ಣ

ಯಶ್ಪಾಲ್ ಸುವರ್ಣ
ಉಡುಪಿ: ಸಿದ್ದರಾಮಯ್ಯನವರದ್ದು ಹಿಂದೂ ವಿರೋಧಿ ಸರಕಾರ ವಾಗಿದ್ದು, ಅದನ್ನು ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇದನ್ನು ಮತ್ತೆ ಸಾಬೀತು ಮಾಡಿದ್ದಾರೆ. ಪುತ್ತಿಗೆ ಮಠದ ಪುರ ಪ್ರವೇಶದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಭಾಗಿಯಾಗಿಲ್ಲ. ಈ ಮೂಲಕ ಅವರು ಉಡುಪಿ ಜನತೆಗೆ ನೋವು ಕೊಟ್ಟಿದ್ದಾರೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಟೀಕಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೆ ಉಸ್ತುವಾರಿ ಸ್ಥಾನದಲ್ಲಿದ್ದವರು ಇಡೀ ಪರ್ಯಾಯ ನಡೆಸುತ್ತಿದ್ದರು. ಲಕ್ಷ್ಮೀ ಹೆಬ್ಬಾಳ್ಕರ್ ಪರ್ಯಾಯದ ಬಗ್ಗೆ ಈವರೆಗೆ ಒಂದೂ ಸಭೆ ಕರೆದಿಲ್ಲ. ಉಡುಪಿ ಪರ್ಯಾ ಯಕ್ಕೆ ನಯಾ ಪೈಸೆ ಅನುದಾನ ಕೊಟ್ಟಿಲ್ಲ. ನಗರಸಭೆ ಅನುದಾನದಲ್ಲಿ 3.50 ಕೋಟಿ ಮೀಸಲಿಟ್ಟು ಕೆಲಸ ಮಾಡುತ್ತಿದ್ದೇವೆ ಎಂದರು.
ಸಚಿವರು ಕನಿಷ್ಠ 15 ದಿನಕ್ಕೊಮ್ಮೆಯಾದರೂ ಉಡುಪಿಗೆ ಭೇಟಿ ನೀಡಬೇಕು. ತಕ್ಷಣ ಅನುದಾರ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಉಡುಪಿಯ ಜನ ಗಡಿ ಭಾಗದಲ್ಲಿ ನಿಮ್ಮನ್ನು ತಡೆಯುವ ಪ್ರಯತ್ನ ಮಾಡುತ್ತಾರೆ. ವಿದ್ಯಾವಂತರ ಜಿಲ್ಲೆಯ ಜನತೆಯ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ಅವರು ಎಚ್ಚರಿಕೆ ನೀಡಿದರು.
ಪರ್ಯಾಯ ಮಹೋತ್ಸವದ ಆಮಂತ್ರಣ ನೀಡಿ ಸಿಎಂ ರನ್ನು ಆಹ್ವಾನ ಮಾಡಿದ್ದೇವೆ. ಉಡುಪಿ ಪರ್ಯಾಯಕ್ಕೆ 25 ಕೋಟಿ ಬೇಡಿಕೆ ಇಟ್ಟಿದ್ದೇವೆ. ಕನಿಷ್ಠ 10 ಕೋಟಿ ಆದರೂ ಬಿಡುಗಡೆ ಮಾಡಿ ಎಂದು ಮತ್ತೆ ಮನವಿ ಮಾಡಿದ್ದೇವೆ. ಸರ್ಕಾರದ ಬೊಕ್ಕಸದಲ್ಲಿ ದುಡ್ಡಿಲ್ಲ ಕನಿಷ್ಠ ಐದು ಕೋಟಿ ಆದರೂ ಕೊಡಿ ಎಂದು ಅವರು ಒತ್ತಾಯಿಸಿದರು.







