ಉಡುಪಿ: ಭಾರೀ ಗಾಳಿಯೊಂದಿಗೆ ಮಳೆ, ಸಿಡಿಲು

ಉಡುಪಿ: ಕಳೆದ ಕೆಲವು ದಿನಗಳಿಂದ ತಡರಾತ್ರಿ ಹಾಗೂ ಬೆಳಗಿನ ಜಾವ ಸುರಿಯುತಿದ್ದ ಅಕಾಲಿಕ ಮಳೆ, ಇಂದು ಸಂಜೆ 7 ಗಂಟೆ ಸುಮಾರಿಗೆ ಭಾರೀ ಗಾಳಿ, ಸಿಡಿಲು-ಗುಡುಗಿನ ಅಬ್ಬರದೊಂದಿಗೆ ಜಿಲ್ಲೆಯಾದ್ಯಂತ ಸುರಿಯುತ್ತಿದೆ.
ನಿನ್ನೆ ತಡ ರಾತ್ರಿಯೂ ಗುಡುಗು ಸಹಿತ ಮಳೆ ಮುಂಜಾನೆಯವರೆಗೆ ಸುರಿದಿತ್ತ್ತಾದರೂ, ಇಂದು ಸಂಜೆ ಗಾಳಿ-ಸಿಡಿಲು, ಗುಡುಗಿನ ಅಬ್ಬರ ಭಾರೀ ಜೋರಾಗಿತ್ತು. ಇದರಿಂದ ಉಡುಪಿ, ಕಾರ್ಕಳ, ಕುಂದಾಪುರ, ಬೈಂದೂರು ಬ್ರಹ್ಮಾವರ ಸೇರಿ ದಂತೆ ಹಲವು ಕಡೆಗಳಲ್ಲಿ ಅಲ್ಲಲ್ಲಿ, ಕಟ್ಟಡದ ಮೇಲುಗಡೆ ಹಾಕಿದ ಬ್ಯಾನರ್‌ಗಳು, ತರಗೆಲೆಗಳಂತೆ ಗಾಳಿಯೊಂದಿಗೆ ಹಾರಿಹೋದವು.
ಸದ್ಯ ಗಾಳಿಯ ಅಬ್ಬರ ಕಡಿಮೆಯಾಗಿದ್ದರೂ ಸಿಡಿಲು-ಗುಡುಗು ಜೋರಾಗಿದೆ. ಇದರೊಂದಿಗೆ ಸಾಧಾರಣ ಮಳೆಯೂ ಸುರಿಯುತ್ತಿದೆ. ತಕ್ಷಣಕ್ಕೆ ಜಿಲ್ಲೆಯಲ್ಲಿ ಯಾವುದೇ ಹಾನಿ ಉಂಟಾಗಿರುವ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ.
ನಿನ್ನೆಯ ಭಾರೀ ಗಾಳಿ-ಮಳೆಗೆ ಕಾಪು ತಾಲೂಕು ಮೂಳೂರಿನ ಮಹಮ್ಮದ್ ಸುಹೈಲ್ ಎಂಬವರ ಮನೆಯ ಮೇಲ್ಚಾವಣಿ ಹಾಗೂ ಗೋಡೆಗೆ ಭಾರೀ ಹಾನಿ ಉಂಟಾಗಿದೆ. ಇದರಿಂದ ಅಂದಾಜು ಎರಡು ಲಕ್ಷ ರೂ.ಗಳಿಗೂ ಅಧಿಕ ಹಾನಿಯ ಅಂದಾಜು ಮಾಡಲಾಗಿದೆ. ಇನ್ನು ಬೈಂದೂರು ತಾಲೂಕು ತೆಗ್ಗರ್ಸೆಯ ಅಬ್ಬಕ್ಕ ಎಂಬವರ ಮನೆಯ ಮೇಲೆ ಕಳೆದ ರಾತ್ರಿಯ ಗಾಳಿಗೆ ಮರವೊಂದು ಮನೆಯ ಮೇಲೆ ಬಿದ್ದು ಮನೆಗೆ ಭಾಗಶ: ಹಾನಿಯುಂಟಾಗಿದ್ದು, 50ಸಾವಿರ ರೂ.ಗಳಿಗೂ ಅಧಿಕ ನಷ್ಟವಾಗಿರುವ ಮಾಹಿತಿ ಬಂದಿದೆ.
ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 8.3ಮಿ.ಮೀ ಮಳೆ ಯಾಗಿದೆ. ಕಾಪುವಲ್ಲಿ ಅತ್ಯಧಿಕ 48.9ಮಿ.ಮೀ. ಮಳೆಯಾದರೆ, ಉಡುಪಿಯಲ್ಲಿ 20.9ಮಿ.ಮೀ, ಕಾರ್ಕಳ ದಲ್ಲಿ 12.2, ಬ್ರಹ್ಮಾವರದಲ್ಲಿ 3.9, ಬೈಂದೂರಿನಲ್ಲಿ 1.4 ಹಾಗೂ ಕುಂದಾಪುರದಲ್ಲಿ 1.1ಮಿ.ಮೀ.ಮಳೆಯಾದ ಬಗ್ಗೆ ವರದಿ ಬಂದಿವೆ.







