ಸರಳಬೆಟ್ಟು ವಸತಿ ಸಮುಚ್ಚಯ ಹಸ್ತಾಂತರ: ಅಧಿಕಾರಿಗಳ ಸಭೆ

ಉಡುಪಿ: ಉಡುಪಿ ನಗರಸಭೆ ವತಿಯಿಂದ ಹೆರ್ಗ ಗ್ರಾಮದ ಸರಳಬೆಟ್ಟುವಿನಲ್ಲಿ ನಿರ್ಮಾಣಗೊಂಡ ವಸತಿ ಸಮುಚ್ಚಯದ ಕಾಮಗಾರಿ ಪೂರ್ಣಗೊಂಡು ಫಲಾನುಭವಿಗಳಿಗೆ ಹಸ್ತಾಂತರಿಸಲು ಸಿದ್ಧವಾಗಿದೆ. ಅಧಿಕಾರಿಗಳು ಶೀಘ್ರ ಮನೆ ಹಸ್ತಾಂತರಕ್ಕೆ ಕ್ರಮ ವಹಿಸಬೇಕು ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ತಿಳಿಸಿದ್ದಾರೆ.
ಉಡುಪಿ ನಗರಸಭೆಯ ಸತ್ಯಮೂರ್ತಿ ಸ್ಮಾರಕ ಸಭಾಭವನದಲ್ಲಿ ನಗರಸಭೆ ಅಧಿಕಾರಿಗಳು ಹಾಗೂ ಕೊಳಗೇರಿ ಅಭಿವೃದ್ದಿ ಮಂಡಳಿ ಅಧಿಕಾರಿಗಳು, ಗುತ್ತಿಗೆ ದಾರ ಕಂಪೆನಿ ಪ್ರತಿನಿಧಿಗಳು ಹಾಗೂ ಬ್ಯಾಂಕ್ ಆಫ್ ಬರೋಡಾದ ಅಧಿಕಾರಿ ಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡುತಿದ್ದರು.
ನಗರಸಭೆ ಹಾಗೂ ಕೊಳಗೇರಿ ಅಭಿವೃದ್ದಿ ಮಂಡಳಿ ಜಂಟಿಯಾಗಿ ನಿರ್ಮಿಸಿದ ಈ ಯೋಜನೆಯಲ್ಲಿ ೨೪೦ ಮಂದಿ ಫಲಾನುಭವಿಗಳಿಗೆ ಮನೆ ಮಂಜೂರು ಗೊಂಡಿದ್ದು ಈಗಾಗಲೇ ಹಲವು ಮಂದಿ ನೋಂದಣಿ ಪ್ರಕ್ರಿಯೆ ಪೂರ್ಣ ಗೊಳಿಸಿದ್ದಾರೆ. ೨೯ ಮಂದಿ ಫಲಾನುಭವಿಗಳು ಪೂರಕ ದಾಖಲೆಗಳ ಸಮಸ್ಯೆ ಯಿಂದ ಬ್ಯಾಂಕ್ ಲೋನ್ ಪ್ರಕ್ರಿಯೆ ಬಾಕಿ ಇದ್ದು, ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಸಾಲ ಮಂಜೂರಾತಿಗೆ ಸಹಕರಿಸುವಂತೆ ಅವರು ಬ್ಯಾಂಕ್ ಅಧಿಕಾರಿಗಳಿಗೆ ಹೇಳಿದರು.
ಸಭೆಯಲ್ಲಿ ಪೌರಾಯುಕ್ತ ರಾಯಪ್ಪ, ನಗರ ಸಭೆಯ ಸದಸ್ಯರು, ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.







