ಕುಂದಾಪುರ: ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

ಸಾಂದರ್ಭಿಕ ಚಿತ್ರ
ಉಡುಪಿ: ಕುಂದಾಪುರ ನಗರದ ಒಳಗೆ ವಾಹನ ದಟ್ಟಣೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳಾದ 1989ರ ಕಲಂ 221 (ಎ)(2) (5)ರ ಅನ್ವಯ ವಾಹನ ದಟ್ಟನೆ ಇರುವ ಈ ಕೆಳಕಂಡ ಮಾರ್ಗಗಳ ರಸ್ತೆಗಳಲ್ಲಿ ಏಕಮುಖ ಸಂಚಾರ ರಸ್ತೆ ಹಾಗೂ ಘನ ವಾಹನಗಳ ಸಂಚಾರ ನಿಷೇಧ ರಸ್ತೆಯನ್ನಾಗಿ ಮಾರ್ಪಡಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.
ಕುಂದಾಪುರ ಪುರಸಭಾ ವ್ಯಾಪ್ತಿಯ ಚಿಕ್ಕನ್ಸ್ಟಾಲ್ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಕುಂದಾಪುರ ಪುರಸಭೆ ವ್ಯಾಪ್ತಿಯ ಮಾಸ್ತಿಕಟ್ಟೆ ರಸ್ತೆಯಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಪೂರ್ವದಿಂದ ಪಶ್ಚಿಮಕ್ಕೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಕುಂದಾಪುರ ಶಾಸ್ತ್ರಿ ಸರ್ಕಲ್ನಿಂದ ಹೊಸ ಬಸ್ ನಿಲ್ದಾಣದವರೆಗೆ ಪುರಸಭೆ ರಸ್ತೆಯ ಪಶ್ಚಿಮ ಬದಿಯ ರಸ್ತೆಯಲ್ಲಿ ಎಲ್ಲಾ ವಾಹನಗಳು ಉತ್ತರಾಭಿಮುಖವಾಗಿ ಸಂಚರಿಸಬೇಕು.
ಹೊಸ ಬಸ್ ನಿಲ್ದಾಣದಿಂದ ಶಾಸ್ತ್ರಿ ಪಾರ್ಕ್ವರೆಗೆ ಪುರಸಭೆಯ ಪೂರ್ವ ಬದಿಯ ರಸ್ತೆಯಲ್ಲಿ ಎಲ್ಲಾ ವಾಹನಗಳು ದಕ್ಷಿಣಾಭಿ ಮುಖವಾಗಿ ಸಂಚರಿಸಬೇಕು. ಕುಂದಾಪುರ ಪುರಸಭೆ ವ್ಯಾಪ್ತಿಯ ಬೇಗಂ ಹಜರತ್ ಮಹಲ್ ರಸ್ತೆ (ಸಟ್ಟಾಡಿ ಡಿಪಾರ್ಟ್ ಮೆಂಟಲ್ ಸ್ಟೋರ್ ಪಕ್ಕದ ರಸ್ತೆ)ಯು ಪುರಸಭೆ ರಸ್ತೆಯ ಪೂರ್ವಕ್ಕೆ ರಾ.ಹೆ 66ಕ್ಕೆ ಕೂಡು ರಸ್ತೆಯಾಗಿ ಹಾದು ಹೋಗಿರುವ ಕಿರಿದಾದ ರಸ್ತೆಯಾಗಿದ್ದು, ಈ ರಸ್ತೆಯಲ್ಲಿ ಪುರಸಭೆ ರಸ್ತೆಯ ಪಶ್ಚಿಮದಿಂದ ಪೂರ್ವಕ್ಕೆ ರಾ.ಹೆ.66 ಕಡೆಗೆ ವಾಹನಗಳು ಸಂಚರಿಸಲು ಹಾಗೂ ಪೂರ್ವದಿಂದ ಪಶ್ಚಿಮಕ್ಕೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಕುಂದಾಪುರ ಪುರಸಭೆ ವ್ಯಾಪ್ತಿಯ ಗ್ರ್ಯಾಂಡ್ ಶಿವಪ್ರಸಾದ್ ಪಕ್ಕದ ರಸ್ತೆಯು ಕಿರಿದಾಗಿದ್ದು, ಈ ರಸ್ತೆಯು ಪೂರ್ವಕ್ಕೆ ರಾ.ಹೆ. 66ಅನ್ನು ಸಂಪರ್ಕಿಸಿದೆ. ಈ ರಸ್ತೆಯಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಪುರಸಭೆಯ ಮುಖ್ಯ ರಸ್ತೆಗೆ ವಾಹನಗಳು ಸಂಚರಿಸಲು ಹಾಗೂ ಪುರಸಭಾ ರಸ್ತೆಯಿಂದ ರಾ.ಹೆ. 66ರ ಕಡೆಗೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.







