ಮಣಿಪಾಲ ಕೆಎಂಸಿಸಿಗೆ ಕೆಎಚ್-ಸಿಸಿಎಲ್ ಕ್ರಿಕೆಟ್ ಟ್ರೋಫಿ

ಮಣಿಪಾಲ: ಆತಿಥೇಯ ಮಣಿಪಾಲ ಕಸ್ತೂರ್‌ಬಾ ಆಸ್ಪತ್ರೆ ತಂಡವು ಈ ಬಾರಿಯ ಕಸ್ತೂರ್‌ಬಾ ಹಾಸ್ಪಿಟಲ್-ಕಾರ್ಪೋರೇಟ್ ಕ್ರಿಕೆಟ್ ಲೀಗ್ (ಕೆಎಚ್-ಸಿಸಿಎಲ್ 2023-24)ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ಮಣಿಪಾಲ ಮಾಹೆಯ ಎಂಡ್‌ಪಾಯಿಂಟ್ ಕ್ರಿಕೆಟ್ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಈ ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು 24 ತಂಡಗಳು ಸ್ಪರ್ಧಿಸಿದ್ದವು. ಅಂತಿಮವಾಗಿ ಮಣಿಪಾಲ ಕಸ್ತೂರಬಾ ಆಸ್ಪತ್ರೆ ತಂಡ ಅಗ್ರಸ್ಥಾನವನ್ನು ಪಡೆಯುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಮಂಗಳೂರಿನ ಟೀಮ್ ಎ.ಜೆ. ರನ್ನರ್‌ಅಪ್ ಸ್ಥಾನವನ್ನು ಪಡೆಯಿತು. ಟೂರ್ನಿಯಲ್ಲಿ ಅವಿನಾಶ್ ಸರಣಿ ಶ್ರೇಷ್ಠ ಗೌರವವನ್ನು ಸ್ವೀಕರಿಸಿದರೆ, ಗಣೇಶ್ ಅತ್ಯುತ್ತಮ ಬ್ಯಾಟಿಂಗ್‌ಗೆ ಹಾಗೂ ಶರೀಫ್ ಅತ್ಯುತ್ತಮ ಬೌಲಿಂಗ್ ಗಾಗಿ ವೈಯಕ್ತಿಕ ಪ್ರಶಸ್ತಿಗಳನ್ನು ಗೆದ್ದುಕೊಂಡರು.
ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಲ್ಲದೇ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಇಂದ್ರಾಳಿ ಜಯಕರ ಶೆಟ್ಟಿ ಉಪಸ್ಥಿತರಿದ್ದರು.
ಕೆಎಂಸಿ ಮಣಿಪಾಲದ ಡೀನ್ ಡಾ.ಪದ್ಮರಾಜ್ ಹೆಗ್ಡೆ, ಕಸ್ತೂರ್ಬಾ ಆಸ್ಪತ್ರೆ ಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಮಾರ್ಕೆಟಿಂಗ್ ಮುಖ್ಯಸ್ಥ ಸಚಿನ್ ಕಾರಂತ್ ಮತ್ತು ಇತರ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.







