ಮರ್ಣೆ: ಸಿಡಿಲು ಬಡಿದು ಮನೆಗೆ ಹಾನಿ

ಉಡುಪಿ, ಜ.10: ಮಂಗಳವಾರ ಸಂಜೆಯ ಬಳಿಕ ಭಾರೀ ಗಾಳಿಯೊಂದಿಗೆ ಸಿಡಿಲು ಸಹಿತ ಸುರಿದ ಮಳೆಗೆ ಜಿಲ್ಲೆಯ ಅನೇಕ ಮನೆಗಳಿಗೆ ಹಾನಿಯಾಗಿರುವ ಬಗ್ಗೆ ಮಾಹಿತಿಗಳು ಬಂದಿವೆ.
ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಗುಬ್ಬಿ ಎಂಬವರ ಮನೆಗೆ ಸಿಡಿಲು ಬಡಿದು ಭಾಗಶ: ಹಾನಿಯಾಗಿದೆ. ಇದರಿಂದ 50ಸಾವಿರಕ್ಕೂ ಅಧಿಕ ನಷ್ಟ ಉಂಟಾದ ಬಗ್ಗೆ ಅಂದಾಜಿಸಲಾಗಿದೆ. ಕಾಪು ತಾಲೂಕಿನ ಕುರ್ಕಾಲು ಗ್ರಾಮದ ನಿರ್ಮಲ ಅಡಿಗ ಎಂಬವರ ಮನೆ ಮೇಲೆ ಮರ ಬಿದ್ದು ಅಪಾರ ಹಾನಿಯುಂಟಾಗಿದೆ.
ಬ್ರಹ್ಮಾವರ ತಾಲೂಕು ಕೋಡಿ ಗ್ರಾಮದ ಬಾಗಿ ಎಂಬವರ ಮನೆ ಮೇಲೆ ರಾತ್ರಿ ವೇಳೆ ಭಾರೀ ಮರವೊಂದು ಬಿದ್ದಿದ್ದು, ಇದರಿಂದ ವಾಸ್ತವ್ಯದ ಮನೆಗೆ ದೊಡ್ಡ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಒಂದು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ. ಇನ್ನು ಕಾಪು ತಾಲೂಕು ಉಳಿಯಾರಗೊಳಿ ಗ್ರಾಮದ ಗೋವಿಂದ ಎಂಬವರ ವಾಸದ ಮನೆ ಭಾರೀ ಗಾಳಿ-ಮಳೆಗೆ ಭಾಗಶ: ಹಾನಿಯಾಗಿದ್ದು, ಒಂದು ಲಕ್ಷ ರೂ.ಗಳಿಗೂ ಹೆಚ್ಚಿನ ಹಾನಿ ಉಂಟಾಗಿರುವ ಬಗ್ಗೆ ವರದಿಗಳು ತಿಳಿಸಿವೆ.
ಕಳೆದೊಂದು ವಾರಕ್ಕೂ ಅಧಿಕ ಸಮಯದಿಂದ ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದ ರೈತರಿಗೂ ಅಪಾರ ಪ್ರಮಾಣ ನಷ್ಟ ಉಂಟಾಗುತ್ತಿದೆ. ಕೊಯ್ದು ಒಣಗಲು ಹಾಕಿದ್ದ ಅಡಿಕೆ ಮಳೆ ನೀರಿಗೆ ನೆನೆದು ನಷ್ಟ ಉಂಟಾಗಿದೆ.
ನಿನ್ನೆ ಸಂಜೆಯಿಂದ ಇಂದು ಬೆಳಗಿನವರೆಗೆ ಕಾರ್ಕಳದಲ್ಲಿ ಅತ್ಯಧಿಕ 23.7 ಮಿ.ಮೀ ಮಳೆಯಾಗಿದೆ. ಉಡುಪಿಯಲ್ಲಿ 23.4, ಕಾಪುವಿನಲ್ಲಿ 15.8, ಹೆಬ್ರಿಯಲ್ಲಿ 12.9, ಕುಂದಾಪುರದಲ್ಲಿ 8.7, ಬೈಂದೂರಿನಲ್ಲಿ 3.4ಮಿ.ಮೀ. ಮಳೆ ಸುರಿದ ಬಗ್ಗೆ ಮಾಹಿತಿಗಳು ಇಲ್ಲಿಗೆ ಬಂದಿವೆ.







