ಯುವಜನತೆ ದೇಶ ನಿರ್ಮಾಣದ ಘಟಕಗಳು: ವೆಂಕಟರಮಣ ಪ್ರಸಾದ್

ಶಿರ್ವ, ಜ.15: ಎಲ್ಲಾ ಯುವಕರು ದೇಶದ ಆಸ್ತಿ ಮತ್ತು ದೇಶ ನಿರ್ಮಾಣದ ಘಟಕಗಳು. ಸ್ವಾಮಿ ವಿವೇಕಾನಂದರು ಅತ್ಯಂತ ಸರಳ ವ್ಯಕ್ತಿಯಾಗಿದ್ದು ಸಮಾಜದ ಸೇವೆಯು ದೇವರ ಸೇವೆ ಎಂದು ನಂಬಿದ್ದರು. ಹಾಗಾಗಿ ಯುವಜನರು ಸಮಾಜ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ನಿಟ್ಟೆ ಎನ್‌ಆರ್‌ಎಎಂ ಪಾಲಿಟೆಕ್ನಿಕ್‌ನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ವೆಂಕಟರಮಣ ಪ್ರಸಾದ್ ಹೇಳಿದ್ದಾರೆ.
ಬಂಟಕಲ್ಲು ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್‌ಕ್ರಾಸ್ ಘಟಕ ಮತ್ತು ಇನ್ನೋವೇಶನ್ ಕೌನ್ಸಿಲ್ ಜಂಟಿಯಾಗಿ ರಾಷ್ಟ್ರೀಯ ಯುವ ದಿನ ಮತ್ತು ಸ್ವಾಮಿ ವಿವೇಕಾನಂದರ 161ನೇ ಜನ್ಮದಿನದ ಅಂಗವಾಗಿ ಇತ್ತೀಚೆಗೆ ಹಮ್ಮಿಕೊಳ್ಳಲಾದ ಯುವಕರಿಗೆ ಸ್ವಾಮಿ ವಿವೇಕಾನಂದರ ಸಂದೇಶ ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮ ದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತಿದ್ದರು.
ಸಂಸ್ಥೆಯ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ರಾಷ್ಟ್ರೀಯ ಯುವ ದಿನಾಚರಣೆಯ ಪ್ರಾಮುಖ್ಯತೆಯನ್ನು ತಿಳಿಸಿದರು. ಉಪ ಪ್ರಾಂಶುಪಾಲ ಡಾ.ಗಣೇಶ್ ಐತಾಳ್, ಡೀನ್ ಡಾ.ಸುದರ್ಶನ್ ರಾವ್, ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪ ಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯೋಜಕ ನಾಗರಾಜ್ ರಾವ್ ಕಾರ್ಯಕ್ರಮವನ್ನು ಆಯೋಜಿಸಿದ್ದರು, ವಿದ್ಯಾರ್ಥಿ ಗಳಾದ ಅನನ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಕ್ಷತಾ ಅತಿಥಿಗಳನ್ನು ಪರಿಚಯಿಸಿ ವಂದಿಸಿದರು.







