ಸಂತ ಜೊಸೇಫ್ ವಾಜ್‌ರ ವಲಯ ಮಟ್ಟದ ವಾರ್ಷಿಕ ಹಬ್ಬ

ಕುಂದಾಪುರ: ಕುಂದಾಪುರ ರೋಜರಿ ಅಮ್ಮನವರ ಚರ್ಚ್‌ನಲ್ಲಿ 333 ವರ್ಷಗಳ ಹಿಂದೆ ಪ್ರಥಮವಾಗಿ ಭಾರತೀಯ ಕೊಂಕಣಿ ಭಾಷಿಕನಾಗಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಲು ಅವಕಾಶ ಪಡೆದ ಧರ್ಮಗುರು ಸಂತ ಜೋಸೆಫ್ ವಾಜ್ ಅವರ ವಾರ್ಷಿಕ ಹಬ್ಬವು ಜ.14ರಂದು ವಲಯ ಮಟ್ಟದಲ್ಲಿ ಆಚರಿಸಲಾಯಿತು.
ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ನಡೆದ ಹಬ್ಬದ ಪವಿತ್ರ ಬಲಿಪೂಜೆಯನ್ನು ಉದ್ಯಾವರ ಚರ್ಚಿನ ಧರ್ಮಗುರು ಫಾ.ಲಿಯೊ ಪ್ರವೀಣ್ ಡಿಸೋಜ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ’ನಾವು ಯೇಸು ಕ್ರಿಸ್ತರ ಅನುಯಾಯಿ ಗಳಾಗಿ ಪಾಪದಲ್ಲಿ ಬೀಳಬಾರದು, ನಾವು ಸಮಾಜದ ಬೆಳಕಾಗಬೇಕು. ಇದಕ್ಕಾಗಿಯೇ ನಾವು ಶ್ರಮಿಸಬೇಕು, ಇದುವೇ ನಿಜವಾದ ಕ್ರಿಸ್ತರ ಸಂದೇಶ. ಹೀಗೆ ಶ್ರಮಿಸುವರಿಗೆ ಕಷ್ಟಗಳು ದೊರಕುತ್ತವೆ, ಆದರೆ ಇವರೇ ಭಾಗ್ಯಶಾಲಿಗಳು, ಅವರಿಗೆ ಸ್ವರ್ಗ ಲಭಿಸುವುದು ಎಂದರು.
ರೋಜರಿ ಚರ್ಚ್‌ನ ಪ್ರಧಾನ ಧರ್ಮಗುರು ಫಾ.ಸ್ಪ್ಯಾನಿ ತಾವ್ರೊ ಬಲಿ ಪೂಜೆಯಲ್ಲಿ ಭಾಗಿಯಾಗಿ ಹಬ್ಬದ ಶುಭಾಶಯಗಳನ್ನು ಸಲ್ಲಿಸಿದರು. ಕುಂದಾಪುರ ಇಗರ್ಜಿಯ ಸಹಾಯಕ ಧರ್ಮಗುರು ಫಾ.ಅಶ್ವಿನ್ ಅರಾನ್ನಾ ಹಾಜರಿದ್ದರು. ಪಾಲನ ಮಂಡಳಿ ಅಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ಹಲವಾರು ಧರ್ಮಭಗಿನಿಯರು, ಬೇರೆ ಬೇರೆ ಇಗರ್ಜಿಯ ಭಕ್ತರು ಪಾಲ್ಗೊಂಡರು.





