ಪುತ್ತಿಗೆ ಪರ್ಯಾಯ ಮಹೋತ್ಸವ: ವೈಭವದ ಶೋಭಯಾತ್ರೆ

ಉಡುಪಿ: ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿಯ ಚತುರ್ಥ ಪರ್ಯಾಯೋತ್ಸವದ ಶೋಭಾ ಯಾತ್ರೆಯು ಗುರುವಾರ ಮುಂಜಾನೆ ವೈಭವಪೂರ್ಣವಾಗಿ ಜರಗಿತು.
ನಗರದ ಜೋಡುಕಟ್ಟೆ ಬದಲು ಇದೇ ಮೊದಲ ಬಾರಿಗೆ ಕಿನ್ನಿಮೂಲ್ಕಿಯ ಸ್ವಾಗತ ಗೋಪುರದಿಂದ ಆರಂಭಗೊಂಡ ಮೆರವಣಿಗೆಯು ಜೋಡುಕಟ್ಟೆ, ಕೋರ್ಟ್ ರಸ್ತೆ, ಹಳೆ ಡಯಾನ ಸರ್ಕಲ್, ಮಿತ್ರ ಆಸ್ಪತ್ರೆ ರಸ್ತೆ, ತೆಂಕಪೇಟೆ ಮಾರ್ಗವಾಗಿ ಶ್ರೀಕೃಷ್ಣಮಠದವರೆಗೆ ಸಾಗಿಬಂತು.
ದಂಡತೀರ್ಥದಲ್ಲಿ ಪುತ್ತಿಗೆ ಸ್ವಾಮೀಜಿ ಪವಿತ್ರ ತೀರ್ಥಸ್ನಾನ ಪೂರೈಸಿ 2.40ಕ್ಕೆ ಕಿನ್ನಿಮೂಲ್ಕಿಯ ಸ್ವಾಗತಗೋಪುರಕ್ಕೆ ಆಗಮಿಸಿದರು. ಅಲ್ಲಿಂದ ಮೆರವಣಿಗೆ ಮೂಲಕ ಆಗಮಿಸಿದ ಸ್ವಾಮೀಜಿ ಜೋಡುಕಟ್ಟೆ ಮಂಟಪದಲ್ಲಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದರು. ಬಳಿಕ ಆರಂಭಗೊಂಡ ಮೆರವಣಿಗೆಯನ್ನು ಸ್ವಾಮೀಜಿ ಹಾಗೂ ಇತರ ಗಣ್ಯರು ವೀಕ್ಷಿಸಿದರು.
ಕೊರಗರ ಡೋಲು, ತಾಲೀಮು ಪ್ರದರ್ಶನ, ಚಿಲಿಪಿಲಿ ಗೊಂಬೆ, ತಟ್ಟಿರಾಯ, ಕಂಬಳದ ಕೋಣ, ಶ್ರೀರಾಮ ಮಂದಿರ, ವೀರಗಾಸೆ, ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳು, ಪರಶುರಾಮ, ಹುಲಿ, ಕಂಸಾಳೆ, ಮಹಾರಾಷ್ಟ್ರದ ಡೋಲು ವಾದನ, ಶಿವನ ಬೃಹತ್ ವಿಗ್ರಹ, ಹರೇರಾಮ, ದಶಾವತಾರ, ಮರಗಾಲು, ಮಹಿಳಾ ಹುಲಿವೇಷಧಾರಿಗಳು, ಆಂಜನಗಿರಿ ಬೆಟ್ಟ, ಕನಕದಾಸರ ಪ್ರತಿಮೆ, ಕಡೆಗೋಲು ಕೃಷ್ಣ, ಶ್ರೀರಾಮ, ಕಾಮಧೇನು, ಭೀಷ್ಮಾಚಾರ್ಯರು, ವಾಲ್ಮಿಕಿ ಮಹರ್ಷಿ, ಜಿ.ಪಂ.ನ ಜಲಜೀವನ್ ಮಿಷನ್ ಅಭಿಯಾನದ ಪ್ರಾತ್ಯಕ್ಷಿಕೆ, ಅರಣ್ಯ ಇಲಾಖೆಯಿಂದ ಅರಣ್ಯ ಸಂರಕ್ಷಣೆಯ ಸಂದೇಶ ನೀಡುವ ಸ್ತಬ್ಧಚಿತ್ರ, ಗೋವರ್ಧನ ಗಿರಿ, ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಕೃಷಿ ಪದ್ಧತಿ ಸೊಗಡು, ನಗರಸಭೆಯ ಒಣತ್ಯಾಜ್ಯ ನಿರ್ವಹಣೆ ಘಟಕದ ಟ್ಯಾಬ್ಲೋ, ಭ್ರೂಣ ಲಿಂಗ ಪತ್ತೆ ಜಾಗೃತಿಯ ಟ್ಯಾಬ್ಲೋಗಳು ಗಮನ ಸೆಳೆದವು.
ಎದುರಿನಲ್ಲಿ ಅಲಂಕೃತ ಪಲ್ಲಕಿಯಲ್ಲಿ ಪಟ್ಟದ ದೇವರನ್ನು ಹೊತ್ತುಕೊಂಡು ಹೋದರೆ, ಅಲಂಕೃತ ವಾಹನದಲ್ಲಿರಿಸಲಾದ ಪಲ್ಲಕಿಯಲ್ಲಿ ಪುತ್ತಿಗೆ ಶ್ರೀಸುಗು ಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಯತಿ ಸಾಗಿಬಂದರು. ಉಳಿದಂತೆ ಯಾವುದೇ ಮಠಾಧೀಶರು ಮೆರವಣಿಗೆಯಲ್ಲಿ ಭಾಗವಹಿಸಿರಲಿಲ್ಲ.
ಮೆರವಣಿಗೆ ಆರಂಭಕ್ಕೆ ಮೊದಲೇ ದಾರಿಯುದ್ದಕ್ಕೂ ಸಹಸ್ರಾರು ಮಂದಿ ಭಕ್ತರು ಕಾದು ಕುಳಿತಿದ್ದರು. ಅಭೂತ ಪೂರ್ವ ಈ ಮೆರವಣಿಗೆಯನ್ನು ಸಾರ್ವಜನಿಕರು ಕಣ್ತುಂಬಿಕೊಂಡರು. ಪರ್ಯಾಯ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕರಾದ ಯಶ್ಪಾಲ್ ಸುವರ್ಣ, ಸುನೀಲ್ ಕುಮಾರ್, ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಸೇರಿದಂತೆ ಹಲವು ಗಣ್ಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಕಿನ್ನಿಮೂಲ್ಕಿ, ಸರ್ವಿಸ್ ಬಸ್ ನಿಲ್ದಾಣ, ಹಳೆ ಕೆಎಸ್‌ಆರ್‌ಟಿಸಿ ಬಸ್ ತಂಗುದಾಣ, ತ್ರಿವೇಣಿ ಸರ್ಕಲ್, ಗಿರಿಜಾ ಸರ್ಜಿಕಲ್ ಬಳಿ, ಪುರಭವನದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪೊಲೀಸ್ ಇಲಾಖೆಯಿಂದ ಡ್ರೋನ್ ಕೆಮರಾಗಳನ್ನು ಕಣ್ಗಾವಲು ಇರಿಸ ಲಾಗಿತ್ತು.
160 ಪೌರಕಾರ್ಮಿಕರಿಂದ ಸ್ವಚ್ಛತಾ ಕಾರ್ಯ
ಸಹಸ್ರಾರು ಸಂಖ್ಯೆಯಲ್ಲಿ ಜನ ಭಾಗವಹಿಸಿದ ಪರ್ಯಾಯ ಮಹೋತ್ಸವದ ಪ್ರಯುಕ್ತ ನಗರದ ಸ್ವಚ್ಛತೆಗಾಗಿ ಉಡುಪಿ ನಗರಸಭೆಯಿಂದ ಒಟ್ಟು 160 ಮಂದಿ ಪೌರಕಾರ್ಮಿಕರನ್ನು ನಿಯೋಜಿಸಲಾಗಿತ್ತು. ಇವರು ಮೆರವಣಿಗೆ ಸಾಗುತ್ತಿದ್ದಂತೆ ಹಾಗೂ ನಗರದಿಂದ ಜನ ಖಾಲಿಯಾಗುತ್ತಿದ್ದಂತೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಪರ್ಯಾಯದ ಹಿನ್ನೆಲೆಯಲ್ಲಿ ಜ.20ರವರೆಗೆ ಹಗಲು ರಾತ್ರಿ ಸ್ವಚ್ಚತಾ ಕಾರ್ಯ ನಡೆಸಲು ನಗರಸಭೆಯ 60 ಹಾಗೂ ಹೊರಗುತ್ತಿಗೆ ಆಧಾರ 100 ಮಂದಿ ಪೌರಕಾರ್ಮಿಕರನ್ನು ನಿಯೋಜಿಸಲಾಗಿದೆ. ಇವರಲ್ಲಿ 100 ಮಂದಿ ರಾತ್ರಿ ಹಾಗೂ 60 ಮಂದಿ ಬೆಳಗ್ಗೆ ಪಾಳಿಯಲ್ಲಿ ಕೆಲಸ ನಿರ್ವಹಿಸಲಿರುವರು. ಅದೇ ರೀತಿ ಭಕ್ತರಿಗೆ ಅನುಕೂಲವಾಗಲು ೧೫ ಕಡೆ ಶೌಚಾಲಯ ಮತ್ತು 10 ಕಡೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು ಎಂದು ಪೌರಾಯುಕ್ತ ರಾಯಪ್ಪ ತಿಳಿಸಿದ್ದಾರೆ.







