ಶ್ರೀರಾಮನ ಪ್ರಾಣ ಪ್ರತಿಷ್ಠೆ: ಸಚಿವೆ ಕರಂದ್ಲಾಜೆಯಿಂದ ಬನ್ನಂಜೆ ದೇವಳದ ಪ್ರಾಂಗಣ ಸ್ವಚ್ಛತೆ

ಉಡುಪಿ, ಜ.18: ಅಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಮಂಗಳ ಕಾರ್ಯದ ನಿಮಿತ್ತ ತೀರ್ಥ ಕ್ಷೇತ್ರಗಳನ್ನು ಸ್ವಚ್ಛಗೊಳಿಸ ಬೇಕೆಂಬ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀಡಿದ ಕರೆಯಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಗುರುವಾರ ಬನ್ನಂಜೆ ಶ್ರೀಮಹಾ ಲಿಂಗೇಶ್ವರ ದೇವಸ್ಥಾನದ ಪ್ರಾಂಗಣವನ್ನು ಸ್ವಚ್ಛಗೊಳಿಸಲಾಯಿತು.
ಬಳಿಕ ಮಾತನಾಡಿದ ಸಚಿವೆ ಶೋಭಾ ಕರಂದ್ಲಾಜೆ, ಎರಡು ವರ್ಷದ ಹಿಂದೆ ಅಯೋಧ್ಯೆ ಒಂದು ಸಣ್ಣ ಹಳ್ಳಿಯಾಗಿತ್ತು. ಈಗ ಗಲ್ಲಿ ರಸ್ತೆ ವಿಶಾಲವಾಗಿ ಬೆಳೆದಿದೆ ಮತ್ತು ಸಾಕಷ್ಟು ಅಭಿವೃದ್ಧಿ ಆಗಿದೆ. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ವಿಶಾಲ ರಸ್ತೆ ಹಾಗೂ ಕಟ್ಟಡಗಳು ಆಗುತ್ತಿದೆ. ದೇಶದ ಎಲ್ಲಾ ದೇವಸ್ಥಾನಗಳು ಸ್ವಚ್ಛವಾಗಬೇಕು ಎಂಬುದು ಪ್ರಧಾನಿಗಳ ಕಲ್ಪನೆಯಾಗಿದೆ. ಅದರಂತೆ ಬನ್ನಂಜೆ ದೇವಸ್ಥಾನದಲ್ಲಿ ಸ್ವಚ್ಛತಾ ಅಭಿಯಾನ ಮಾಡಿದ್ದೇವೆ. ಈ ಕಾರ್ಯ ಬಹಳ ಖುಷಿ ತಂದಿದೆ ಎಂದರು.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶಪಾಲ್ ಸುವರ್ಣ, ಬಿಜೆಪಿ ಮುಖಂಡರಾದ ಉದಯ ಕುಮಾರ್ ಶೆಟ್ಟಿ, ಶ್ಯಾಮಲಾ ಕುಂದರ್, ವೀಣಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
‘ರಾಮ ಎಲ್ಲರ ದೇವರು ಅವನಿಗೆ ಜಾತಿ ಧರ್ಮ ಇಲ್ಲ. ದೇಶದಲ್ಲಿ ವೋಟ್ ಬ್ಯಾಂಕ್ ರಾಜಕಾರಣ ನಡೆಯುತ್ತಿದೆ. ಒಂದು ವರ್ಗದ ಮತ ಸೆಳೆಯಲು ಓಲೈಕೆಗಾಗಿ ರಾಮನ ತಿರಸ್ಕಾರ ಮಾಡಲಾಗುತ್ತಿದೆ. ಅನೇಕ ನಾಯಕರಿಗೆ ರಾಮ ಮಂದಿರ ಉದ್ಘಾಟನೆಗೆ ಬರಬೇಕು ಎಂಬ ಇಚ್ಛೆ ಇದೆ . ರಾಜಕೀಯದ ಕಾರಣಕ್ಕೆ ಹಲವರು ದೂರ ಸರಿಯುತ್ತಿದ್ದಾರೆ. ಲೋಕಸಭಾ ಚುನಾವಣೆ ಮುಗಿದ ಕೂಡಲೇ ಎಲ್ಲರೂ ಅಯೋಧ್ಯೆಗೆ ಬರುತ್ತಾರೆ. ವಿರೋಧಿಸಿದ ಎಲ್ಲರೂ ರಾಮನ ದರ್ಶನ ಮಾಡುತ್ತಾರೆ’
-ಶೋಭಾ ಕರಂದ್ಲಾಜೆ, ಸಚಿವರು







