ಏಳು ಮಠಾಧೀಶರ ಅನುಪಸ್ಥಿತಿಯಲ್ಲಿ ನಾಲ್ಕನೇ ಬಾರಿಗೆ ಸರ್ವಜ್ಞ ಪೀಠ ಏರಿದ ಪುತ್ತಿಗೆ ಸ್ವಾಮೀಜಿ

ಉಡುಪಿ, ಜ.18: 2008-10ರಲ್ಲಿ ನಡೆದ ತಮ್ಮ ಮೂರನೇ ಪರ್ಯಾಯದಂತೆ ಗುರುವಾರ ಬೆಳಗಿನ ಜಾವ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರ ನಾಲ್ಕನೇ ಪರ್ಯಾಯದ ಎಲ್ಲಾ ಸಾಂಪ್ರದಾಯಿಕ, ಧಾರ್ಮಿಕ ವಿಧಿವಿಧಾನಗಳು ಅಷ್ಟ ಮಠಗಳಲ್ಲಿ ಏಳು ಮಠಾಧೀಶರ ಗೈರುಹಾಜರಿಯಲ್ಲಿ ನಡೆದವು.
ಇಲ್ಲಿ ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ ಮುಂದಿನ ಎರಡು ವರ್ಷಗಳ ಅವಧಿಗೆ ಶ್ರೀಕೃಷ್ಣನ ಪೂಜಾ ಕೈಂಕರ್ಯ ದೀಕ್ಷೆಯನ್ನು ಅವರು ಸ್ವೀಕರಿಸಿದರು.
ಇದಕ್ಕೆ ಮೊದಲು ನಡೆದ ಪರ್ಯಾಯ ಮೆರವಣಿಗೆಯಲ್ಲಿ ಪರ್ಯಾಯ ಪೀಠ ಏರುವ ಪುತ್ತಿಗೆ ಶ್ರೀಗಳು ಹಾಗೂ ಅವರ ಪಟ್ಟ ಶಿಷ್ಯ ಶ್ರೀಸುಶ್ರೀಂದ್ರ ತೀರ್ಥರು ಮಾತ್ರ ಪಾಲ್ಗೊಂಡಿದ್ದು, ಉಳಿದ ಏಳು ಮಂದಿ ಮಠಾಧೀಶರು ಅವರ ಶಿಷ್ಯರೊಂದಿಗೆ ಗೈರಾಗಿದ್ದರು.
ಮೆರವಣಿಗೆ ರಥಬೀದಿ ಮೂಲಕ ಶ್ರೀಕೃಷ್ಣ ಮಠ ಪ್ರವೇಶಿಸಿದ ಬಳಿಕದ ಎಲ್ಲಾ ಸಂಪ್ರದಾಯಗಳು ಉಳಿದ ಮಠಗಳ ಅನು ಪಸ್ಥಿತಿಯಲ್ಲಿ ಜರಗಿದವು. ಎರಡು ವರ್ಷಗಳ ಪರ್ಯಾಯವನ್ನು ಯಶಸ್ವಿಯಾಗಿ ಪೂರೈಸಿ ಇಂದು ಪುತ್ತಿಗೆ ಶ್ರೀಗಳಿಗೆ ಅಧಿಕಾರ ಹಸ್ತಾಂತರಿಸಬೇಕಿದ್ಧ ಕೃಷ್ಟಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ, ಶ್ರೀಮಧ್ವಾಚಾರ್ಯರು ಸ್ಥಾಪಿಸಿದ ಮಠದ ಸಂಪ್ರದಾಯ ದಂತೆ ಯಾವ ವಿಧಿವಿಧಾನಗಳನ್ನೂ ನೆರವೇರಿಸದೇ ತಮ್ಮ ಮಠಕ್ಕೆ ಹಿಂದಿರುಗಿದ್ದರು.
ಹೀಗಾಗಿ ಕೃಷ್ಣಾಪುರ ಮಠಾಧೀಶರ ಅನುಪಸ್ಥಿತಿಯಲ್ಲಿ ಅದಮಾರು ಮಠದ ಹಿರಿಯ ಯತಿಗಳಾದ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಪುತ್ತಿಗೆ ಶ್ರೀಗಳಿಗೆ ಅಧಿಕಾರ ಹಸ್ತಾಂತರದ ವಿಧಿವಿಧಾನಗಳನ್ನು ಮಾಡಿ ಪೂರೈಸಿದರು. ಮೊದಲು ಮಠದ ಮಧ್ವಾಚಾರ್ಯರ ಪ್ರತಿಮೆಯ ಸಮ್ಮುಖದಲ್ಲಿ ಅವರ ಕಾಲದಿಂದ ಬಂದ ಮಠದ ಕೀಲಿಕೈ, ಅಕ್ಷಯ ಪಾತ್ರೆ ಹಾಗೂ ಸೆಟ್ಟುಗಳನ್ನು ಹಸ್ತಾಂತರ ಮಾಡಿದ ಅದಮಾರುಶ್ರೀಗಳು ಬಳಿಕ ಚಂದ್ರಶಾಲೆಯಲ್ಲಿ ಸರ್ವಜ್ಞ ಪೀಠಾರೋಹಣದ ವಿಧಿ ವಿಧಾನಗಳನ್ನು ಸಹ ಪೂರೈಸಿದರು.
ಈ ಮೂಲಕ ಕೃಷ್ಣಾಪುರ ಸ್ವಾಮೀಜಿಗಳ ಅನುಪಸ್ಥಿತಿಯಲ್ಲಿ ಪುತ್ತಿಗೆ ಶ್ರೀಗಳಿಗೆ ಮುಂದಿನೆರಡು ವರ್ಷಗಳ ಕಾಲ ಶ್ರೀಕೃಷ್ಣ ಮಠದ ಸಂಪೂರ್ಣ ಅಧಿಕಾರದ ಹಸ್ತಾಂತರದ ಎಲ್ಲಾ ಧಾರ್ಮಿಕ ವಿಧಿವಿಧಾನಗಳ ನಿರ್ವಹಣೆಯನ್ನು ಅದಮಾರು ಶ್ರೀವಿಶ್ವ ಪ್ರಿಯ ತೀರ್ಥರೇ ನೆರವೇರಿಸಿದರು. ಈ ಎಲ್ಲಾ ಪೂಜಾಧಿಕಾರ ಹಸ್ತಾಂತರದ ನಂತರ ಅರಳು ಗದ್ದುಗೆಯಲ್ಲಿ ಖಾಸಗಿ ದರ್ಬಾರ್ ನಡೆಯಿತು. ಈ ಎಲ್ಲಾ ಸಂದರ್ಭದಲ್ಲಿ ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರತೀರ್ಥ ಸ್ವಾಮೀಜಿ ಜೊತೆಗಿದ್ದರು.
ಖಾಸಗಿ ದರ್ಬಾರಿನ ಬಳಿಕ ಪುತ್ತಿಗೆಶ್ರೀಗಳಿಬ್ಬರು ರಾಜಾಂಗಣಕ್ಕೆ ಬಂದು ಪರ್ಯಾಯ ದರ್ಬಾರಿನಲ್ಲಿ ಭಾಗವಹಿಸಿದರು. ಇದರಲ್ಲಿ ಶ್ರೀಗಳೊಂದಿಗೆ ಆಹ್ವಾನಿತ ವಿಶೇಷ ಅತಿಥಿಗಳು, ಗಣ್ಯರು ಪಾಲ್ಗೊಂಡರು.
ದಂಡತೀರ್ಥದಿಂದ ಪ್ರಾರಂಭ: ಮಧ್ವಾಚಾರ್ಯರು ವಿದ್ಯಾಭ್ಯಾಸ ಮಾಡಿದ ಕಾಪು ಸಮೀಪದ ದಂಡತೀರ್ಥದಲ್ಲಿ ಸ್ನಾನ ಮುಗಿಸಿದ ಬಂದ ಪುತ್ತಿಗೆ ಶ್ರೀಗಳು, ಈ ಬಾರಿ ಕಿನ್ನಿಮೂಲ್ಕಿಯಿಂದ ಪ್ರಾರಂಭಗೊಂಡ ಪರ್ಯಾಯ ಮೆರವಣಿಗೆಯನ್ನು ಜೋಡುಕಟ್ಟೆ ಬಳಿ ಸೇರಿಕೊಂಡರು. ಜೋಡುಕಟ್ಟೆಯಲ್ಲಿ ಪಟ್ಟದ ದೇವರಾದ ವಿಠಲನಿಗೆ ವಿಶೇಷ ಪೂಜೆ ಸಲ್ಲಿಸಿ ಹೂವಿನಿಂದ ಅಲಂಕೃತ ಪಲ್ಲಕ್ಕಿಯಲ್ಲಿ ಕುಳಿತು ಭವ್ಯ ಮೆರವಣಿಗೆಯಲ್ಲಿ ಕೋರ್ಟು ರಸ್ತೆ, ತೆಂಕಪೇಟೆ ಮಾರ್ಗವಾಗಿ ರಥಬೀದಿಗೆ ಬಂದರು.
1522ರಲ್ಲಿ ಸೋದೆ ಮಠದ ವಾದಿರಾಜರು ಆರಂಭಿಸಿದ ಎರಡು ವರ್ಷಗಳ ಪರ್ಯಾಯ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆ ಯುತಿದ್ದು, ಪರ್ಯಾಯದ 32ನೇ ಚಕ್ರದ ನಾಲ್ಕನೇ ಪರ್ಯಾಯ ಇದಾಗಿದೆ. 63 ವರ್ಷ ಪ್ರಾಯದ ಶ್ರೀಸುಗುಣೇಂದ್ರ ತೀರ್ಥರು ಇದೀಗ ನಾಲ್ಕನೇ ಬಾರಿಗೆ ಶ್ರೀಕೃಷ್ಣನ ಪೂಜಾ ಹಾಗೂ ಮಠದ ಆಡಳಿತ ಅಧಿಕಾರವನ್ನು ಪಡೆದುಕೊಂಡರು. ಇವರ ಅಧಿಕಾರಾವಧಿ 2026ರ ಜ.18ರವರೆಗೆ ಇರಲಿದೆ.
ಕನಕನ ಕಿಂಡಿಯಿಂದ ದರ್ಶನ: ಮೆರವಣಿಗೆ ರಥಬೀದಿ ತಲುಪಿದಾಗ ಮಠಾಧೀಶರು ಪಲ್ಲಕ್ಕಿಯಿಂದ ಇಳಿದು ನೆಲಕ್ಕೆ ಹಾಸಿದ ಬಿಳಿ ನಡೆಮುಡಿಯ ಮೇಲೆ ಸಾಗಿ ಕನಕಗೋಪುರದ ಬಳಿ ಬಂದರು. ಕನಕನ ಕಿಂಡಿ ಮೂಲಕ ಮೊದಲು ಕೃಷ್ಣನ ದರ್ಶನ ಪಡೆದರು. ಬಳಿಕ ಅವರು ಚಂದ್ರಮೌಳೀಶ್ವರ ಮತ್ತು ಅನಂತೇಶ್ವರ ದೇವಸ್ಥಾನಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಶ್ರೀಕೃಷ್ಣ ಮಠ ಪ್ರವೇಶಿಸಿದರು.







