ಉಡುಪಿಯಲ್ಲಿ ರೇಡಿಯೋ ಪ್ರಸಾರ ಕೇಂದ್ರಕ್ಕೆ ಶಂಕುಸ್ಥಾಪನೆ

ಉಡುಪಿ: ಉಡುಪಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಆಕಾಶವಾಣಿ ಎಫ್‌ಎಂ ರೇಡಿಯೋ ಪ್ರಸಾರ ಕೇಂದ್ರ (ಟ್ರಾನ್ಸ್‌ಮೀಟರ್)ಕ್ಕೆ ಪ್ರಧಾನಿ ನರೇಂದ್ರ ಮೋದಿ ಚೆನ್ನೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವರ್ಚುವಲ್ ವೇದಿಕೆಯ ಮೂಲಕ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.
ಅಜ್ಜರಕಾಡು ನಾಯರ್‌ಕೆರೆ ಸಮೀಪ ಈ ಹಿಂದೆ ದೂರದರ್ಶನ ರಿಲೇ ಪ್ರಸಾರ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದ್ದ ಕಟ್ಟಡ ದಲ್ಲಿ ಪ್ರಧಾನಿ ಮೋದಿ ಚಾಲನೆ ಕೊಟ್ಟಿರುವ ಆಕಾಶವಾಣಿ ಎಫ್‌ಎಂ ರೇಡಿಯೋ ಪ್ರಸಾರ ಕೇಂದ್ರ ಕಾರ್ಯನಿರ್ವಹಿಸಲಿದೆ ಎಂದು ಆಕಾಶವಾಣಿ ಮತ್ತು ದೂರದರ್ಶನ ತಾಂತ್ರಿಕ ನೌಕರರ ಸಂಘದ ರಾಷ್ಟ್ರೀಯ ವಕ್ತಾರ ಚಂದ್ರಶೇಖರ್ ಶೆಟ್ಟಿ ತಿಳಿಸಿದ್ದಾರೆ.
ಶಿಕ್ಷಣ, ಮಾಹಿತಿ, ಮನೋರಂಜನೆ ಹಾಗೂ ಕೇಂದ್ರ ಸರಕಾರ ಎಲ್ಲಾ ಜನಪರ ಯೋಜನೆಗಳು ಮತ್ತು ಮಾಹಿತಿಯನ್ನು ಮನೆಮನೆಗೆ ಮುಟ್ಟಿಸುವ ನಿಟ್ಟಿನಲ್ಲಿ ರೇಡಿಯೋ ಕೇಂದ್ರಗಳ ವಿಸ್ತರಣೆಯು ಕೇಂದ್ರ ಸರಕಾರದ ಬಿ.ಐ.ಎನ್.ಡಿ. ಯೋಜನೆಯಡಿಯಲ್ಲಿ ನಡೆಯುತ್ತಿದೆ. ಅದರಂತೆ ದೇಶದ ನಾನಾ ಕಡೆಗಳಲ್ಲಿ ಸುಮಾರು 600ಕ್ಕೂ ಅಧಿಕ ಎಫ್‌ಎಂ ಟ್ರಾನ್ಸ್‌ಮೀಟರ್(ಪ್ರಸಾರ ಕೇಂದ್ರಗಳು) ಹಂತಹಂತವಾಗಿ ಬರುತ್ತಿದ್ದು, ಇದರಿಂದ ಸಮಾಜದ ಪ್ರತಿಯೊಬ್ಬರಿಗೂ ಸರಕಾರ ಸವಲತ್ತುಗಳ ಮಾಹಿತಿ ಸಿಗುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಂಗಳೂರು ಆಕಾಶವಾಣಿಯ ಮುಖ್ಯಸ್ಥ ಉನ್ನಿಕೃಷ್ಣನ್, ತಾಂತ್ರಿಕ ವಿಭಾಗದ ಮುಖ್ಯಸ್ಥೆ ಮೋಹಿನಿ ಬೈಲೂರು, ಬ್ರಹ್ಮಾವರ ಆಕಾಶವಾಣಿ ಮುಖ್ಯಸ್ಥ ಅಜಿತ್ ಕುಮಾರ್ ಬೈಕಾಡಿ, ಬೈಕಾಡಿ ಸುಪ್ರಸಾದ್ ಶೆಟ್ಟಿ ಮೊದಲಾದ ವರು ಉಪಸ್ಥಿತರಿದ್ದರು.







