ಅಕ್ಷರ ದಾಸೋಹ ನೌಕರರ ಮುಷ್ಕರ: ಶಿಕ್ಷಣಾಧಿಕಾರಿಗಳಿಗೆ ಮನವಿ

ಕುಂದಾಪುರ, ಜ.20: ಅಕ್ಷರ ದಾಸೋಹ ಯೋಜನೆ ಶಿಕ್ಷಣ ಇಲಾಖೆಯಡಿ ಇರಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜ.23ರಂದು ಎಲ್ಲ ಬಿಸಿಯೂಟ ನೌಕರರು ಬಿಸಿಯೂಟ ಬಂದ್ ಮಾಡಿ, ಉಡುಪಿಯ ಜಿಲ್ಲಾಧಿ ಕಾರಿ ಕಚೇರಿ ಎದುರುಗಡೆ ಸಂಸದರ ಕಚೇರಿ ಚಲೋ ಹೋರಾಟ ಹಮ್ಮಿಕೊಳ್ಳುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಬಿಸಿಯೂಟ ನೌಕರರು ಹಲವಾರು ವರ್ಷಗಳಿಂದ ಈಗಾಗಲೇ ಬೇಡಿಕೆಗಳ ಬಗ್ಗೆ ಮನವಿ ಕೊಟ್ಟಿದ್ದಲ್ಲದೆ ಹೋರಾಟವನ್ನು ಕೈಗೊಂಡಿದ್ದಾರೆ. ಆದರೆ ಈವರೆಗೆ ಯಾವುದೆ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಈ ಹಿನ್ನೆಲೆಯಲ್ಲಿ ಬಿಸಿಯೂಟ ಬಂದ್ ಮಾಡಿ, ಸಂಸದರ ಕಚೇರಿ ಚಲೋ ಹೋರಾಟದಲ್ಲಿ ಬಿಸಿಯೂಟ ನೌಕರರು ಪಾಲ್ಗೊಳ್ಳಲಿದ್ದಾರೆ ಎಂದು ಕುಂದಾಪುರ ಅಕ್ಷರ ದಾಸೋಹ (ಬಿಸಿಯೂಟ) ನೌಕರರ ಸಂಘದಿಂದ ಶುಕ್ರವಾರ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಹಾಗೂ ಶನಿವಾರ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷೆ ಜಯಶ್ರೀ ಪಡುವರಿ, ಕುಂದಾಪುರ ತಾಲೂಕು ಅಧ್ಯಕ್ಷೆ ಸಿಂಗಾರಿ ನಾವುಂದ, ಕುಂದಾಪುರದಲ್ಲಿ ಕಾರ್ಯದರ್ಶಿ ನಾಗರತ್ನಾ, ಕೋಶಾಧಿಕಾರಿ ಆಶಾ ತೆಕ್ಕಟ್ಟೆ ಉಪಸ್ಥಿತರಿದ್ದರು.





