ಎಂಡೋಸಲ್ಫಾನ್ ಬಾಧಿತರ ಬಹುಕಾಲದ ಬೇಡಿಕೆ ಈಡೇರಿಕೆ: ಉಡುಪಿ ಡಿಸಿ ಡಾ.ಕೆ.ವಿದ್ಯಾಕುಮಾರಿ
ಹಿರಿಯಡ್ಕ: ಎಂಡೋಸಲ್ಫಾನ್ ಬಾಧಿತರಿಗೆ ಫಿಸಿಯೋಥೆರಪಿ ಸೌಲಭ್ಯ

ಉಡುಪಿ: ಜಿಲ್ಲೆಯಲ್ಲಿ ಎಂಡೋಸಲ್ಫಾನ್‌ನಿಂದ ಬಾಧಿತರಾದ ಸಾವಿರಾರು ಮಂದಿ ಸಂತ್ರಸ್ಥರಿಗೆ ಹಿರಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ನ್ಯಾಶನಲ್ ಹೆಲ್ತ್ ಮಿಷನ್ ಯೋಜನೆಯಡಿ ನಿರ್ಮಿಸಿದ ಕಟ್ಟಡದಲ್ಲಿ ಸುಸಜ್ಜಿತ, ಆಧುನಿಕ ಫಿಸಿಯೋಥೆರಪಿ ಸೌಲಭ್ಯ ಇಂದು ಉದ್ಘಾಟನೆಗೊಂಡಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಎಂಡೋಸಲ್ಫಾನ್ ಬಾಧಿತರ ಹಲವು ಬೇಡಿಕೆ ಗಳಲ್ಲಿ ಉತ್ತಮ ಫಿಸಿಯೋಥೆರಪಿ ಸೌಲಭ್ಯ ಕೂಡ ಒಂದು. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಬಾಧಿತರಿಗೆ ನಗರ ಪ್ರದೇಶ ಗಳಿಗೆ ತೆರಳಿ ಚಿಕಿತ್ಸೆಯನ್ನು ಪಡೆಯುವುದು ಅಸಾಧ್ಯವಾಗಿದ್ದು, ಸ್ಥಳೀಯವಾಗಿಯೇ ಎಂಡೋಸಲ್ಫಾನ್ ವಾರ್ಡ್‌ಗಳ ನಿರ್ಮಾಣವು ಅವರಿಗೆ ಸಹಕಾರಿಯಾಗಲಿದೆ ಎಂದರು.
ಫಿಸಿಯೋಥೆರಪಿ ಸೌಲಭ್ಯವನ್ನು ಎಂಡೋಸಲ್ಫಾನ್ ಬಾಧಿತರು ಮಾತ್ರ ವಲ್ಲದೇ, ಪ್ರತಿಯೊಬ್ಬರು ಅದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಮುಂಬರುವ ದಿನಗಳಲ್ಲಿ ವಾರ್ಡ್‌ಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವು ದರೊಂದಿಗೆ, ಸ್ಥಳೀಯ ಜನರು ಎಂಡೋಸಲ್ಫಾನ್ ವಾರ್ಡಿನ ಅನುಕೂಲತೆ ಯನ್ನು ಪಡೆದುಕೊಳ್ಳಬೇಕು ಎಂದರು.
ಎಂಡೋಸಲ್ಫಾನ್ ಬಾಧಿತರಿಗೆ ಆರೋಗ್ಯ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸಿದ್ದ ಒನ್‌ಗುಡ್ ಸ್ಟೆಪ್ ಸಂಸ್ಥೆಯು ಜೆನಿಸಿಸ್ ಪ್ಯಾಕೇಜಿಂಗ್ ಪ್ರೈವೆಟ್ ಲಿ.ನ ಧನಸಹಾಯದಿಂದ ಹಿರಿಯಡ್ಕದ ಪಿಎಚ್‌ಸಿ ಆವರಣದ ಎನ್‌ಎಚ್‌ಎಂ ಯೋಜನೆಯಡಿ ನಿರ್ಮಾಣಗೊಂಡ ಕಟ್ಟಡದಲ್ಲಿ ಪ್ರಾರಂಭಿಸಿದ ಫಿಸಿಯೋಥೆರಪಿ ಸೌಲಭ್ಯ ಕೇಂದ್ರವನ್ನು ಉದ್ಘಾಟಿಸಿದ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಎಂಡೋಸಲ್ಫಾನ್ ಬಾಧಿತರಿಗೆ ಧೈರ್ಯ ಮತ್ತು ಶಕ್ತಿಯನ್ನು ತುಂಬುವ ಕೆಲಸವನ್ನು ಸಮಾಜ ಮಾಡಬೇಕು ಎಂದರು.
ಎಂಡೋಸಲ್ಫಾನ್‌ನಂತಹ ಮಾರಕ ಕಾಯಿಲೆಯಿಂದ ಮುಕ್ತಿ ಪಡೆದರೆ ಮಾತ್ರ ಸುಸ್ಥಿರ ಸಮಾಜ ನಿರ್ಮಾಣಗೊಳ್ಳಲು ಸಾಧ್ಯ. ಸಮಾಜದಲ್ಲಿ ಹಲವು ವರ್ಷಗಳ ಹಿಂದೆ ಯಾರೋ ಮಾಡಿದ ತಪ್ಪಿಗೆ ಇಂದು ಎಂಡೋ ಸಲ್ಫಾನ್ ಸಂತ್ರಸ್ಥರು ಶಿಕ್ಷೆಯನ್ನು ಅನುಭಸಿಕೊಂಡು ಬರುತಿದ್ದಾರೆ. ಅವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ದೊರಕುವುದು ಅತ್ಯಂತ ಅಗತ್ಯವಾ ಗಿದೆ ಎಂದರು.
ಒನ್‌ಗುಡ್ ಸ್ಟೆಪ್ ಸಂಸ್ಥೆಯ ನಿರ್ದೇಶಕಿ ಅಮಿತಾ ಪೈ ಪ್ರಾಸ್ತಾವಿಕವಾಗಿ ಮಾತನಾಡಿ, 80ರ ದಶಕದಲ್ಲಿ ಗೋಡಂಬಿ ಕೃಷಿಗೆ ಬಳಸಿದ ಕೀಟನಾಶಕ ಎಂಡೋಸಲ್ಘಾನ್‌ನ ದುಷ್ಪರಿಣಾಮಗಳು ಇಂದೂ ಜನರಲ್ಲಿ ಕಾಣಿಸುತ್ತಿದೆ. ಆ ಕೀಟನಾಶಕದ ಬಳ ಕೆಗೆ ಈಗ ನಿಷೇಧವಿದೆ. ಆದರೆ ಆಗ ಸಿಂಪಡಿಸಿದ ಎಂಡೋಸಲ್ಫಾನ್‌ನಿಂದ ಜಿಲ್ಲೆಯ ಬಹುಭಾಗದ ಜನರು ನರ ದೌರ್ಬಲ್ಯ, ಮಾಂಸ ಖಂಡಗಳ ಸೆವೆತ, ಬುದ್ದಿ ಮಾಂದ್ಯತೆ, ಬಂಜೆತನ ಇನ್ನಿತ್ಯಾದಿ ಸಮಸ್ಯೆ ಗಳಿಂದ ಬಳಲುತ್ತಿದ್ದಾರೆ. ಎಂಡೋ ಸಲ್ಫಾನ್ ಪೀಡಿತರ ಹಲವು ಬೇಡಿಕೆಗಳಲ್ಲಿ ಉತ್ತಮ ಫಿಸಿಯೋಥೆರಪಿ ಸೌಲಭ್ಯ ಕೂಡ ಒಂದು ಎಂದರು.
ಮುಂದಿನ ದಿನಗಳಲ್ಲಿ ಜಿಲ್ಲೆಯ ಉಳಿದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಫಿಸಿಯೋಥೆರಪಿ ಸೌಲಭ್ಯಗಳನ್ನು ಪ್ರಾರಂಭಿ ಸುವ ಯೋಜನೆಯಿದೆ. ಎಂಡೋ ಸಲ್ಫಾನ್ ಸಂತ್ರಸ್ಥರಲ್ಲದೆ ಫಿಸಿಯೋಥೆರಪಿ ಅಗತ್ಯ ಇರುವ ಸುತ್ತಮುತ್ತಲಿನ ಪರಿಸರದ ಜನ ಈ ಸೌಲಭ್ಯಗಳನ್ನು ಬೆಳೆಸಿಕೊಳ್ಳಬಹುದು ಎಂದು ಅಮಿತಾ ಪೈ ಹೇಳಿದರು.
ಬೊಮ್ಮರಬೆಟ್ಟು ಗ್ರಾಪಂ ಅಧ್ಯಕ್ಷೆ ಜಯಂತಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಐ.ಪಿ ಗಡದ್, ಡಾ. ಪ್ರಶಾಂತ್ ಭಟ್, ಜೆನಿಸಿಸ್ ಪ್ಯಾಕೇಜಿಂಗ್ ಪೈವೆಟ್ ಲಿ.ನ ಮಾಲಕ ಕೌಶಲ್ ವೋರಾ, ಎಂಡೋಸಲ್ಫಾನ್ ಸಂತ್ರಸ್ಥರ ಪರವಾಗಿ ಹೋರಾಟ ನಡೆಸುತ್ತಿರುವ ಡಾ.ರವೀಂದ್ರನಾಥ್ ಶಾನುಭಾಗ್, ಜಿಲ್ಲಾ ವಿಕಲಚೇತನರ ಅಧಿಕಾರಿ ರತ್ನ, ದಿನೇಶ್ ವೋರಾ ಮತ್ತಿತರು ಉಪಸ್ಥಿತರಿದ್ದರು.
ಹಿರಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸತ್ಯಶಂಕರ್ ಸ್ವಾಗತಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವಿಜಯ ಪೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







