ಮುಜರಾಯಿ ದೇವಸ್ಥಾನಗಳ ಆಸ್ತಿ ಪರಾಭಾರೆ; ಸರ್ವೆಗೆ ಸೂಚನೆ: ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ

ಕುಂದಾಪುರ: ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನ ಸಹಿತ ಮುಜರಾಯಿ ದೇವಸ್ಥಾನದ ಆಸ್ತಿಗಳು ಪರಾಭಾರೆ ಬಗ್ಗೆ ದೂರುಗಳು ಬಂದಿದ್ದು, ಈಗಾಗಾಲೇ ಸರ್ವೆ ಮಾಡಲು ಸೂಚಿಸಲಾಗಿದೆ ಎಂದು ರಾಜ್ಯ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.
ಮಾರಣಕಟ್ಟೆ ಶ್ರೀಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ರವಿವಾರ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಜರಾಯಿ ಮತ್ತು ಕಂದಾಯ ಇಲಾಖೆಗೆ ಒಬ್ಬರೆ ಮುಖ್ಯ ಕಾರ್ಯದರ್ಶಿಯಾಗಿದ್ದು ಸರ್ವೆಗೆ ಅವರು ಆದೇಶ ಮಾಡಿದ್ದಾರೆ. ರಾಜ್ಯದಲ್ಲಿ ಸಾವಿರಾರು ದೇವಸ್ಥಾನಗಳಿರುವುದರಿಂದ ಈ ಕಾರ್ಯದಲ್ಲಿ ಸ್ವಲ್ಪ ವಿಳಂಬವಾಗುತ್ತಿದೆ. ಸರ್ವೆ ಬಳಿಕ ಪರಾಬಾರೆಯಾಗಿದ್ದ ಆಸ್ತಿಗಳನ್ನು ಸರಕಾರ ಮತ್ತೆ ವಾಪಾಸ್ಸು ಪಡೆದು ಕೊಳ್ಳಲಿದೆ ಎಂದರು.
ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅವಧಿ ಮುಗಿದಿದ್ದು ನೂತನ ಸಮಿತಿ ಬಗ್ಗೆ ಈಗಾ ಗಾಲೇ ಪ್ರಕ್ರಿಯೆ ಪ್ರಾರಂಭವಾಗಿದೆ. ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು ಅದೆಲ್ಲವನ್ನೂ ಪರಿಶೀಲಿಸಿ ಹಂತಹಂತವಾಗಿ ನಿಯಮಾನುಸಾರ ಮಾಡುವ ಜವಬ್ದಾರಿಯಿದೆ ಎಂದು ಅವರು ಹೇಳಿದರು.
ಕೊಲ್ಲೂರಿನಲ್ಲಿ ನಡೆಯುತ್ತಿರುವ ಯುಜಿಡಿ ಕಾಮಗಾರಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೇವಸ್ಥಾನದ ಹಣವನ್ನು ಯಾವುದೇ ಕಾಮಗಾರಿಗೆ ಬಳಸುವ ಅಧಿಕಾರ ಇಲ್ಲ. ಆಯುಕ್ತರಿಗೆ ಕೂಡ ಈ ಅಧಿಕಾರ ಇಲ್ಲ. ಟೆಂಡರ್ ಕರೆದು ಅವರೆ ಕೆಲಸ ಮಾಡಿಸಬಹುದು. ಈ ಬಗ್ಗೆ ಗಮನಕ್ಕೆ ಬಂದಿದೆ. ಅಲ್ಲದೆ ಯುಜಿಡಿ ಕಾಮಗಾರಿ ಕಳಪೆ ಬಗ್ಗೆ ಶೀಘ್ರವೇ ಖುದ್ದು ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಮುಜರಾಯಿ ದೇವಸ್ಥಾನಗಳ ನೌಕರರನ್ನು ಅಂತರ್ ದೇವಸ್ಥಾನಗಳಿಗೆ ವರ್ಗಾವಣೆ ಮಾಡುವ ವಿಚಾರ ಸರಕಾರದ ಮುಂದೆ ಇಲ್ಲ. ಆದರೆ ನೌಕರರ ವಿರುದ್ಧ ಯಾವುದೇ ದೂರುಗಳು ಬಂದರೆ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ರಾಮಲಿಂಗ ರೆಡ್ಡಿ ತಿಳಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಸಿ. ಸದಾಶಿವ ಶೆಟ್ಟಿ ಸಚಿವರನ್ನು ಸ್ವಾಗತಿಸಿದರು. ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಮುಖಂಡರಾದ ಎಸ್.ರಾಜು ಪೂಜಾರಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ವಂಡಬಳ್ಳಿ ಜಯರಾಮ ಶೆಟ್ಟಿ, ಬಾಬು ಹೆಗ್ಡೆ ತೆಗ್ಗರ್ಸೆ, ಉದಯ ಕುಮಾರ್ ಶೆಟ್ಟಿ ವಂಡ್ಸೆ, ಶಂಕರ್ ಪೂಜಾರಿ ಬೈಂದೂರು, ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಕೆಎಸ್‌ಆರ್‌ಟಿಸಿ ನಿಗಮದ ಮಾಜಿ ನಿರ್ದೇಶಕ ಟಿ.ಕೆ.ಸುಧೀರ್ ಮೊದಲಾದವರು ಉಪಸ್ಥಿತರಿದ್ದರು.
‘ದೇವಸ್ಥಾನಗಳ ಉನ್ನತೀಕರಣಕ್ಕಾಗಿ ಹಾಗೂ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮೈಸೂರು ಚಾಮುಂಡೇಶ್ವರೀ ದೇವಸ್ಥಾನ, ಬಳ್ಳಾರಿ ಹುಲಿಗಮ್ಮ ದೇವಸ್ಥಾನ ಹಾಗೂ ದೊಡ್ಡಬಳ್ಳಾಪುರದ ಘಾಟಿ ಸುಬ್ರಮಣ್ಯ ದೇವಸ್ಥಾನದಲ್ಲಿ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಚಿಂತನೆ ಇದ್ದು, ಈ ಬಗ್ಗೆ ಕೊಲ್ಲೂರು ಮತ್ತು ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಪ್ರಸ್ತಾವನೆ ಈಗ ಇಲ್ಲ’ -ರಾಮಲಿಂಗ ರೆಡ್ಡಿ, ಮುಜರಾಯಿ ಸಚಿವರು
ಉಡುಪಿ ಶ್ರೀಕೃಷ್ಣ ಮಠಕ್ಕೆ ಸಚಿವರು ಭೇಟಿ
ಸಾರಿಗೆ ಮತ್ತು ಮುಜರಾಯಿ ಸಚಿವ ಡಾ.ರಾಮಲಿಂಗಾ ರೆಡ್ಡಿ ಇಂದು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣ ಮತ್ತು ಮುಖ್ಯಪ್ರಾಣ ದೇವರ ದರ್ಶನ ಮಾಡಿದರು.
ಬಳಿಕ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಸಚಿವರನ್ನು ಗೌರವಿಸಿದರು. ಈ ಸಂದರ್ಭ ದಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಪ್ರಸಾದ್‌ರಾಜ್ ಕಾಂಚನ್, ಕೃಷ್ಣಮೂರ್ತಿ ಆಚಾರ್ಯ, ಕಿಶನ್ ಹೆಗ್ಡೆ ಕೊಳ್ಕೆಬೈಲು, ದೇವಿಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಅದೇ ರೀತಿ ಸಚಿವರು ಮಲ್ಪೆಶಿವಡಬಂಡೇಶ್ವರ ಶ್ರೀಬಲರಾಮ ದೇವಸ್ಥಾನದ ಬ್ರಹ್ಮ ಕಳಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅಲ್ಲದೆ ಕೋಟ ಹಲವು ಮಕ್ಕಳು ತಾಯಿ ಕೋಟ ಅಮೃತೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ.ಕುಂದರ್, ದೇವಸ್ಥಾನ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಆನಂದ್ ಸಿ.ಕುಂದರ್ ಉಪಸ್ಥಿತರಿದ್ದರು.







