ಮೌನೇಶ ಬಡಿಗೇರಗೆ ಅಂಬಾತನಯ ಮುದ್ರಾಡಿ ಸಂಸ್ಮರಣಾ ಪುಸ್ತಕ ಪ್ರಶಸ್ತಿ ಪ್ರದಾನ

ಉಡುಪಿ, ಜ.28: ರಂಗಭೂಮಿ ಉಡುಪಿ ವತಿಯಿಂದ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸಹಯೋಗದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರವಿವಾರ ನಡೆದ ಸಮಾರಂಭದಲ್ಲಿ ಅಂಬಾತನಯ ಮುದ್ರಾಡಿ ಸಂಸ್ಮರಣಾ ಪುಸ್ತಕ ಪ್ರಶಸ್ತಿಯನ್ನು ಲೇಖಕ ಮೌನೇಶ ಬಡಿಗೇರರಿಗೆ ಪ್ರದಾನ ಮಾಡಲಾಯಿತು.
ಮೊದಲ ವರ್ಷದ ಪ್ರಶಸ್ತಿ ವಿಜೇತ ಪುಸ್ತಕ 'ಅಭಿನಯ ಕಲಿಸಲು ಸಾಧ್ಯವಿಲ್ಲ' ಇದರ ಲೇಖಕ ಮೌನೇಶ್ ಬಡಿಗೇರ ಅವರಿಗೆ ಚಿಂತಕ ಡಾ.ಕೆ.ಎಂ.ರಾಘವ ನಂಬಿಯಾರ್ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿದ ಮೌನೇಶ್ ಮಾತನಾಡಿ, ಅಭಿಯಾನ ಕಲಿಸಲು ಸಾಧ್ಯವಿಲ್ಲ. ಆದರೆ ಕಲಿಯಬಹುದೆಂಬ ತುಡಿತ, ಆಸಕ್ತಿ ಇರುವ ವಿದ್ಯಾರ್ಥಿಗಳು ಕಲಿಯಬಹು ದಾಗಿದೆ. ಇಂದಿನ ಮೊಬೈಲ್, ಸಾಮಾಜಿಕ ಜಾಲತಾಣಗಳ ಯುಗದಲ್ಲಿ ರಂಗಭೂಮಿ ಕಟ್ಟುವುದು ತುಂಬಾ ಕಷ್ಟದ ಕೆಲಸ. ನಮ್ಮ ಆಳುವ ರಾಜಕಾರಣಿಗಳಿಗೆ ಸಾಹಿತ್ಯದ ಸ್ಪರ್ಶ ಅತೀ ಅಗತ್ಯವಾಗಿ ಇರಬೇಕಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಇಂದು ಯುವ ಜನತೆ ಐಟಿಬಿಟಿಯತ್ತ ಮುಖ ಮಾಡಿ ಪ್ಯಾಕೇಜ್ ಬಗ್ಗೆ ಚರ್ಚೆ ಮಾಡುತ್ತಿದೆ. ಅವರಿಗೆಲ್ಲ ಸಾಹಿತ್ಯದ ಬಗ್ಗೆ ಪರಿವೇ ಇಲ್ಲವಾಗಿದೆ. ಮಂದಿರ ಒಡೆದರೆ ಕಟ್ಟ ಬಹುದು. ಆದರೆ ಮನಸ್ಸು ಒಡೆದರೆ ಕಟ್ಟಲು ಸಾಧ್ಯವಿಲ್ಲ. ಆದುದರಿಂದ ಸಾಹಿತ್ಯ, ಕಲೆಗಳು ಮನಸ್ಸು ಕಟ್ಟುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಅಂಬಾತನಯ ಮುದ್ರಾಡಿ ಎಲ್ಲ ಕಲಾ ಪ್ರಕಾರಗಳಲ್ಲಿಯೂ ಸವ್ಯಸಾಚಿ ಆಗಿದ್ದರು. ಅವರು ತನ್ನ ಬದುಕಿನ ದೃಷ್ಟಿ ಬದಲಾಯಿಸಿದರಿಂದ ಅವರ ಬದುಕಿನ ದೃಶ್ಯವೇ ಬದಲಾಯಿತು. ಇವರು ಸಮಾಜಕ್ಕಾಗಿ ತಮ್ಮ ಬದುಕನ್ನು ಕಟ್ಟಿಕೊಂಡರು ಎಂದು ಹೇಳಿದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀ ನಾರಾಯಣ ಕಾರಂತ ಮಾತನಾಡಿದರು. ಉಡುಪಿ ಕನ್ನಡ ಮತ್ತ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ರಂಗಭೂಮಿ ಉಪಾಧ್ಯಕ್ಷರಾದ ಭಾಸ್ಕರ ರಾವ್ ಕಿದಿಯೂರು, ಎನ್.ಆರ್.ಬಲ್ಲಾಳ್, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ, ವಿಜಯ ಕುಮಾರ್ ಉಪಸ್ಥಿತರಿದ್ದರು.
ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಬೆಳಗೋಡು ರಮೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಪಾರ್ವತಿ ಜಿ.ಐತಾಳ್ ವಂದಿಸಿದರು.







