ಕಾಪು: ಬೈಕ್ ಗಳ ಮಧ್ಯೆ ಅಪಘಾತ; ಸಹ ಸವಾರ ಮೃತ್ಯು

ಕಾಪು: ಉಳಿಯಾರಗೋಳಿ ಕೋತಲಕಟ್ಟೆ ಎಂಬಲ್ಲಿ ರವಿವಾರ ಸಂಜೆ ಎರಡು ಬೈಕ್ ಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟು, ಇಬ್ಬರು ಸವಾರರು ಗಾಯಗೊಂಡ ಬಗ್ಗೆ ವರದಿಯಾಗಿದೆ.
ಮೃತರನ್ನು ಬೈಕ್ ಸಹ ಸವಾರ ಪಾಂಗಾಳ ದುರ್ಗಾ ವೆಲ್ ರಿಂಗ್ ವರ್ಕ್ಸ್ ಕಾರ್ಮಿಕ ಮಲ್ಲೇಶ್ (53) ಎಂದು ಗುರುತಿಸಲಾಗಿದೆ. ಬೈಕ್ ಸವಾರರಾದ ಜಯನ್ ಹಾಗೂ ಶ್ರೀನಿವಾಸ್ ಎಂಬವರು ಗಾಯಗೊಂಡಿದ್ದಾರೆ.
ಉಡುಪಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಪಲ್ಸರ್ ಬೈಕ್ ಮತ್ತು ಉಳಿಯಾರಗೋಳಿ ಸರ್ವೀಸ್ ರಸ್ತೆಯಿಂದ ಹೆದ್ದಾರಿಗೆ ಪ್ರವೇಶಿಸುತ್ತಿದ್ದ ಹೋಂಡಾ ಫ್ಯಾಶನ್ ಬೈಕ್ ಪರಸ್ಪರ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಅಪಘಾತದ ರಭಸಕ್ಕೆ ಸಹ ಸವಾರನಾಗಿದ್ದ ಮಲ್ಲೇಶ್ ರಸ್ತೆಗೆ ಎಸೆಯಲ್ಪಟ್ಟರು. ತಲೆಗೆ ತೀವ್ರವಾಗಿ ಗಾಯಗೊಂಡ ಇವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





