ಬೆಂಗಳೂರು-ಕಾರವಾರ ರೈಲಿಗೆ ಹೆಚ್ಚುವರಿ ಬೋಗಿ ಅಳವಡಿಸುವಂತೆ ಮನವಿ

ಬೈಂದೂರು, ಜ.29: ಬೆಂಗಳೂರು- ಕಾರವಾರಕ್ಕೆ ರೈಲು ಸೇವೆಗಳನ್ನು ನೇರ ಮಾರ್ಗದಲ್ಲಿ ವಿಸ್ತರಿಸಿದ್ದಕ್ಕೆ ಹಾಗೂ ಎಸ್.ಎಂ.ವಿ.ಟಿ ಬೆಂಗಳೂರಿನಿಂದ ಮಂಗಳೂರುವರೆಗೆ ಇದ್ದ ರೈಲನ್ನು ಮುರ್ಡೇಶ್ವರದವರೆಗೆ ವಿಸ್ತರಿಸಿದ್ದಕ್ಕಾಗಿ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಕೃತಜ್ಞತೆ ಸಲ್ಲಿಸಿರುವ ಸಂಸದ ಬಿ.ವೈ ರಾಘವೇಂದ್ರ, ಬೆಂಗಳೂರು-ಕಾರವಾರ ಎಕ್ಸ್‌ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ ಅಳವಡಿಸುವಂತೆ ಮನವಿ ಮಾಡಿದ್ದಾರೆ.
ರೈಲು ಸಂಖ್ಯೆ 16595/16596 ಪಂಚಗಂಗಾ ಎಕ್ಸ್‌ಪ್ರೆಸ್ ಸಾಮರ್ಥ್ಯವನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಬೇಕೆಂದು ಕರಾವಳಿ ಕರ್ನಾಟಕ ಪ್ರದೇಶದ ಸಾರ್ವಜನಿಕರ ಬೇಡಿಕೆ ಆಗಿದ್ದು, ಪ್ರಸ್ತುತ ಎಲ್ಲಾ ಇತರ ರೈಲುಗಳು 22 ಎಲ್.ಎಚ್.ಬಿ ಕೋಚ್‌ಗಳೊಂದಿಗೆ ಓಡುತ್ತಿದ್ದರೂ, ಪಂಚ ಗಂಗಾ ಎಕ್ಸ್‌ಪ್ರೆಸ್ ರೈಲು ಕೇವಲ 14 ಎಲ್.ಎಚ್.ಬಿ ಕೋಚ್‌ಗಳೊಂದಿಗೆ ಓಡುತ್ತಿದೆ. ಕರಾವಳಿ ಕರ್ನಾಟಕ ಪ್ರದೇಶದಿಂದ ಬೆಂಗಳೂರಿಗೆ ಕನಿಷ್ಠ ಸಮಯದೊಂದಿಗೆ ತಲುಪುವ ಏಕೈಕ ರೈಲು ಇದಾಗಿದ್ದು, ಈ ರೈಲಿನಲ್ಲಿ ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸುವುದು ಅತ್ಯಗತ್ಯ ವಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ಈಗಿರುವ ಪಂಚಗಂಗಾ ರೈಲಿನ ನಿರ್ಗಮನ ಹಾಗೂ ಆಗಮನದ ಸಮಯದಲ್ಲಿ ಯಾವುದೇ ವ್ಯತ್ಯಾಸಗಳು ಆಗದ ರೀತಿಯಲ್ಲಿ ಬೋಗಿಗಳನ್ನು ಹೆಚ್ಚಿಸಲು ಅವಕಾಶವಿದೆ. ಆದುದರಿಂದ ಪಂಚಗಂಗಾ ಎಕ್ಸ್‌ಪ್ರೆಸ್ 14 ಎಲ್‌ಎಚ್‌ಬಿ ಕೋಚ್‌ಗಳನ್ನು 22 ಎಲ್‌ಎಚ್‌ಬಿ ಕೋಚ್‌ಗಳಿಗೆ ಬೆಂಗಳೂರು ಹಾಗೂ ಕಾರವಾರದ ಆಗಮನ ಮತ್ತು ನಿರ್ಗಮನ ಸಮಯದಲ್ಲಿ ಯಾವುದೇ ಬದಲಾವಣೆಯಿಲ್ಲದೆ ಹೆಚ್ಚಿಸಬೇಕೆಂದು ಸಂಸದರು ಸಚಿವರಲ್ಲಿ ವಿನಂತಿಸಿದ್ದಾರೆ.
ಪಂಚಗಂಗಾ ರೈಲಿಗೆ ಹೆಚ್ಚುವರಿ ಬೋಗಿ ಬದಲು ಹೊಸ ರೈಲು ಓಡಿಸಿ: ಗಣೇಶ್ ಪುತ್ರನ್
ಪಂಚಗಂಗಾ ರೈಲು ಕರಾವಳಿಯ ಉದ್ಯೋಗಿಗಳಿಗೆ ಜೀವನಾಧಾರವಾಗಿದ್ದು, ಈ ರೈಲು ಯಶಸ್ವಿಯಾಗಲು ವೇಳಾ ಪಟ್ಟಿಯೇ ಮೂಲ ಕಾರಣವಾಗಿದೆ. ಒಂದೊಮ್ಮೆ ಹೆಚ್ಚುವರಿ ಕೋಚ್ ಅಳವಡಿಸಿದಲ್ಲಿ ವೇಳಾಪಟ್ಟಿ ಬದಲುಗೊಂಡು ರೈಲಿನ ಸಮಯ ಬಹಳಷ್ಟು ವಿಳಂಭವಾಗಲಿದೆ ಎಂದು ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ತಿಳಿಸಿದ್ದಾರೆ.
ಹೆಚ್ಚುವರಿ ಕೋಚ್ ಹಾಕಿದರೆ ಬೆಂಗಳೂರು ಮುಟ್ಟುವ ಸಮಯ ವಿಳಂಬವಾಗಲಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಕೋಚ್ ಹಾಕುವುದಾದರೆ ಯಾವ ಕಾರಣಕ್ಕೂ ರೈಲಿನ ಸಮಯ ಬದಲಾಗ ಬಾರದು. ಬೆಂಗಳೂರಿಗೆ ಐದೇ ಐದು ನಿಮಿಷ ವಿಳಂಬ ವಾಗಿ ಹೋದರೂ ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿ ಜನ ಕಚೇರಿಗಳಿಗೆ ರಜೆ ಹಾಕಬೇಕಾದ ಸ್ಥಿತಿ ಎದುರಾಗುತ್ತದೆ.
ಈ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೇ ನಿಗಮ ಕೆಲವೊಂದು ಖಾಸಗಿ ಲಾಬಿಗಳ ಜತೆ ಶಾಮೀಲಾದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೂರುಗಳು ಬರುತ್ತಿದ್ದು, ಹೆಚ್ಚುವರಿ ಬೋಗಿ ಹಾಕಿ ಪಂಚಗಂಗಾ ರೈಲಿನ ಸಮಯ ಹಾಳು ಮಾಡುವ ಸಂಚು ರೂಪಿಸಲಾಗಿದೆಯೇ ಎಂಬ ಅನುಮಾನ ಮೂಡಿದೆ. ಎಷ್ಟೇ ಬೋಗಿ ಹಾಕಿದರೂ ಕೂಡಾ ರೈಲಿನ ಬೇಡಿಕೆ ಕಡಿಮೆ ಯಾಗುವುದಿಲ್ಲ. ಹೊಸ ರೈಲು ಓಡಿಸುವುದು ಈ ಸಮಸ್ಯೆಗೆ ಪರಿಹಾರವಾಗಿದೆ. ಈ ಸಮಸ್ಯೆ ಪರಿಹಾರ ಮಾಡದೇ ಪಂಚಗಂಗಾ ರೈಲಿನ ಸಮಯ ಹಾಳು ಮಾಡಿದರೆ ತೀವ್ರ ಪ್ರತಿಭಟನೆ ಅನಿವಾರ್ಯ ಎಂದು ಅವರು ಎಚ್ಚರಿಕೆ ನೀಡಿದರು.







