ಬೈಂದೂರಿನಲ್ಲಿ ’ನಮ್ಮೂರ ಮಸೀದಿ ನೋಡಬನ್ನಿ’ ವಿಶಿಷ್ಟ ಕಾರ್ಯಕ್ರಮ

ಬೈಂದೂರು, ಜ.30: ಕರವಾಳಿಯಲ್ಲಿ ಮಸೀದಿಯಿಂದಲೇ ಇಸ್ಲಾಮೀ ಸಂಸ್ಕೃತಿಯ ಆರಂಭಗೊಂಡಿತು. 648ರಲ್ಲಿ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಮಸೀದಿ ಬಾರ್ಕೂರಿನಲ್ಲಿ ನಿರ್ಮಿಸಿದ ದಾಖಲೆ ಕೂಡ ಇತಿಹಾಸ ಪುಟಗಳಲ್ಲಿದೆ. ಸಾವಿರಾರು ವರ್ಷಗಳ ಹಳೆಯ ಮಸೀದಿಗಳು ಕೂಡ ಉಡುಪಿ ಜಿಲ್ಲೆಯಾದ್ಯಂತ ನಾವು ಕಾಣಬಹುದು ಎಂದು ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಮುಹಮ್ಮದ್ ಇದ್ರೀಸ್ ಹೂಡೆ ಹೇಳಿದ್ದಾರೆ.
ಜಮೀಯ್ಯತುಲ್ ಫಲಾಹ್ ಬೈಂದೂರು ಘಟಕ, ಖತೀಜತುಲ್ ಖುಬ್ರ ಮಸೀದಿ ಆಡಳಿತ ಸಮಿತಿ ಹಾಗೂ ಎಸ್‌ಐಓ ಉಡುಪಿ ಜಿಲ್ಲೆ ಸಹಕಾರ ದೊಂದಿಗೆ ರವಿವಾರ ಬೈಂದೂರಿನ ಖತೀಜತುಲ್ ಖುಬ್ರ ಮಸೀದಿಯಲ್ಲಿ ಆಯೋಜಿಸಲಾದ ’ನಮ್ಮೂರ ಮಸೀದಿ ನೋಡಬನ್ನಿ’ ವಿನೂತನ ಕಾರ್ಯಕ್ರಮ ದಲ್ಲಿ ಅವರು ಮಾತನಾಡುತಿದ್ದರು.
ಮಸೀದಿಯಲ್ಲಿ ನಡೆಯುವ ಆಚರಣೆ ನಿಗೂಢವಾಗಿರಬಾರದು ಮತ್ತು ಎಲ್ಲರಿಗೂ ತೆರೆದು ಕೊಂಡಿರಬೇಕು ಎಂಬುದು ಈ ಕಾರ್ಯಕ್ರಮದ ಉದ್ದೇಶ ವಾಗಿದೆ. ಧರ್ಮ ಧರ್ಮಗಳು ನಿಗೂಢವಾಗುತ್ತಿರುವ ಸಂದರ್ಭದಲ್ಲಿ ಎಲ್ಲಾ ಧರ್ಮಗಳು ತಮ್ಮನ್ನು ತಾವು ಬೇರೆಯವರೊಂದಿಗೆ ಬೆರೆಯುಂತಹ ಮುಕ್ತ ಅವಕಾಶಗಳನ್ನು ಸೃಷ್ಟಿಸಬೇಕು. ಅದಕ್ಕಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿದೆ ಎಂದರು.
ಅಧ್ಯಕ್ಷತೆಯನ್ನು ಸಾದಾ ಅಬೂಬಕರ್ ಬಾಷಾ ಸಾಹೇಬ್ ವಹಿಸಿದ್ದರು. ಸಿಐಟಿಯು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ್, ಬ್ಲಡ್ ಹೆಲ್ಪ್‌ಕೇರ್ ಕರ್ನಾಟಕ ಕಾರ್ಯದರ್ಶಿ ಸಂಶುದ್ದೀನ್ ಬಳ್ಳುಂಜೆ, ಬೈಂದೂರು ಹೋಲಿ ಕ್ರಾಸ್ ಚರ್ಚ್ ಧರ್ಮಗುರು ವಿನ್ಸೆಂಟ್ ಕೊಹೆಲ್ಲೊ ಮಾತನಾಡಿದರು.
ಉದ್ಯಮಿ ನಾಗೂರು ಅಬ್ದುಸ್ಸಮದ್ ಸಾಹೇಬ್ ಉಪಸ್ಥಿತರಿದ್ದರು. ಹುಸೈನ್ ಸಾಹೇಬ್ ಸ್ವಾಗತಿಸಿದರು. ಜಮೀಯ್ಯತುಲ್ ಫಲಾಹ್ ಘಟಕ ಅಧ್ಯಕ್ಷ ಶೇಖ್ ಫಯಾಝ್ ಅಲಿ ವಂದಿಸಿದರು. ಬ್ಲಡ್ ಹೆಲ್ಸ್‌ಕೇರ್ ಕರ್ನಾಟಕ ಮಾಧ್ಯಮ ಕಾರ್ಯದರ್ಶಿ ಅಬ್ದುಲ್ ಹಮೀದ್ ಗೋಳ್ತಮಜಲು ನಿರೂಪಿಸಿದರು.







