ಯಶ್ಪಾಲ್ ಸುವರ್ಣ ಪ್ರಚೋದಿಸುವ ಕೆಲಸ ಬಿಟ್ಟು ಅಭಿವೃದ್ಧಿ ಬಗ್ಗೆ ಚಿಂತಿಸಲಿ: ರಮೇಶ್ ಕಾಂಚನ್

ಯಶ್ಪಾಲ್ ಸುವರ್ಣ
ಉಡುಪಿ: ಪ್ರತಿಯೊಬ್ಬರ ಮನೆಗಳಲ್ಲಿ ಹನುಮ ಧ್ವಜವನ್ನು ಹಾಕುವುದರ ಮೂಲಕ ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟಿಸಿ ಎಂಬುದಾಗಿ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿರುವ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮೊದಲು ತಮ್ಮನ್ನು ಜನ ಆಯ್ಕೆ ಮಾಡಿರುವ ಉದ್ದೇಶವನ್ನು ತಿಳಿದು ಮಾತನಾಡುವ ಕೆಲಸ ಮಾಡಲಿ ಎಂದು ಉಡುಪಿ ನಗರಸಭಾ ವಿಪಕ್ಷ ನಾಯಕ ಹಾಗೂ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಟೀಕಿಸಿದ್ದಾರೆ.
ಶಾಸಕರು ಈ ಹಿಂದೆ ಹಿಜಾಬ್ ವಿಚಾರ ಬಂದಾಗ, ಪ್ಯಾರಾಮೆಡಿಕಲ್ ಕಾಲೇಜಿನ ವೀಡಿಯೋ ಪ್ರಕರಣ, ಅಯೋಧ್ಯೆಯ ರಾಮ ಮಂದಿರ ಪ್ರತಿ ಷ್ಠಾಪವನೆ ವಿಚಾರದಲ್ಲಿ ಕೂಡ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ರಜೆ ಪಡೆದುಕೊಳ್ಳಿ ಎಂಬ ಪ್ರಚೋದನ ಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಜನರಲ್ಲಿ ಗೊಂದಲ ಮೂಡಿಸುವ ಕೆಲಸವನ್ನು ಮಾಡಿದ್ದರು. ಆದರೆ ತಾವು ನಡೆಸಿಕೊಂಡು ಬರುವಂತಹ ಸಂಸ್ಥೆಗಳಾದ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಹಾಗೂ ದಕ್ಷಿಣ ಕನ್ನಡ ಮೀನುಗಾರಿಕಾ ಫೆಡರೇಷನ್ ಉದ್ಯೋಗಿಗಳಿಗೆ ರಜೆಯನ್ನು ಘೋಷಿಸಲಿಲ್ಲ ಎಂದು ಅವರು ದೂರಿದರು.
ಜಿಲ್ಲೆಯಲ್ಲಿ ಐದು ಮಂದಿ ಬಿಜೆಪಿ ಶಾಸಕರಿದ್ದು ಉಡುಪಿಯಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳು ಸಾಕಷ್ಟಿದೆ. ಡಿಸೆಂಬರ್ ತಿಂಗಳಲ್ಲಿ ಇಂದ್ರಾಳಿ ರೈಲು ಮೇಲ್ಸೇತುವೆ ಕಾಮಾಗಾರಿ ಪೂರ್ಣಗೊಳಿಸುವುದಾಗಿ ಸ್ವತಃ ಶಾಸಕ ಯಶ್ಪಾಲ್ ಸುವರ್ಣ ಅವರೇ ಮಾಧ್ಯಮ ಹೇಳಿಕೆ ನೀಡಿದ್ದು ಈವರೆಗೆ ಅದರ ಸುದ್ದಿಯೇ ಇಲ್ಲ ಮತ್ತು ಸಂತೆಕಟ್ಟೆ ಅಂಡರ್ ಪಾಸ್ ಕಾಮಗಾರಿ ನಿಂತು ಹೋಗಿದ್ದು ಸಾರ್ವಜನಿಕರು ಬಹಳಷ್ಟು ಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಹತ್ತು ಹಲವು ಸಮಸ್ಯೆಗಳು ಉಡುಪಿ ಕ್ಷೇತ್ರದಲ್ಲಿದ್ದು ಅದರ ಕುರಿತು ಶಾಸಕರು ಹೆಚ್ಚಿನ ಮುತುವರ್ಜಿ ವಹಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಲಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







