ಜಯಕರ ಶೆಟ್ಟಿಗೆ ನಿಡಂಬೂರು ಶ್ರೀ ಪ್ರಶಸ್ತಿ ಪ್ರದಾನ

ಉಡುಪಿ: ಅಂಬಲಪಾಡಿ ಶ್ರೀಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಯೋಗದೊಂದಿಗೆ 66ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಅಂಬಲಪಾಡಿ ಕಂಬ್ಳಕಟ್ಟ ಶ್ರೀ ಜನಾರ್ದನ ಮಂಟಪದಲ್ಲಿ ಶನಿವಾರ ಜರಗಿತು.
ನಿಡಂಬೂರು ಶ್ರೀ ಪ್ರಶಸ್ತಿಯನ್ನು ನಿವೃತ್ತ ಮುಖ್ಯೋಪಾಧ್ಯಾಯ ಜಯಕರ ಶೆಟ್ಟಿ ಹಾಗೂ ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿಯನ್ನು ಬೆಂಗಳೂರಿನ ಕರ್ನಾಟಕ ಕಲಾದರ್ಶಿನಿ ತಂಡಕ್ಕೆ ಪ್ರದಾನ ಮಾಡಲಾಯಿತು. ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿಯನ್ನು ಕಲಾದರ್ಶಿನಿ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಸಾಸ್ತಾನ ಸ್ವೀಕರಿಸಿದರು.
ಕಿದಿಯೂರು ಜನಾರ್ದನ ಆಚಾರ್ಯ ಪ್ರಶಸ್ತಿಯನ್ನು ರಾಮಕೃಷ್ಣ ಮಂದಾರ್ತಿ, ಕಪ್ಪೆಟ್ಟು ಬಾಬು ಶೆಟ್ಟಿಗಾರ್ ಪ್ರಶಸ್ತಿಯನ್ನು ಕೃಷ್ಣಸ್ವಾಮಿ ಜೋಯಿಸ್ ಬ್ರಹ್ಮಾವರ ಹಾಗೂ ಕುತ್ಪಾಡಿ ಆನಂದ ಗಾಣಿಗ ಪ್ರಶಸ್ತಿಯನ್ನು ನಾಗಪ್ಪ ಹೊಳೆಮೊಗೆ ಅವರಿಗೆ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಡಾಕ್ಟರೇಟ್ ಪದವಿ ಪಡೆದ ಶ್ರೀಮತಿ ಭ್ರಮರಿ ಶಿವಪ್ರಕಾಶ್ ಅವರನ್ನು ಅಭಿ ನಂದಿಸಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತ ನಾಡಿದರು. ಅಧ್ಯಕ್ಷತೆಯನ್ನು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ. ಬೀ.ವಿಜಯ ಬಲ್ಲಾಳ್ ವಹಿಸಿದ್ದರು. ಅಂಬಲಪಾಡಿ ಸ್ಕ್ಯಾನಿಂಗ್ ಸೆಂಟರ್‌ನ ಮಾಲಕ ಡಾ.ನವೀನ್ ಬಲ್ಲಾಳ ಉಪಸ್ಥಿತರಿದ್ದರು.
ಮಂಡಳಿಯ ಅಧ್ಯಕ್ಷ ಕೆ.ಅಜಿತ್ ಕುಮಾರ್ ಸ್ವಾಗತಿಸಿದರು. ಹಿರಿಯ ಸದಸ್ಯ ರಾದ ಮುರಲಿ ಕಡೆಕಾರ್ ಸಮ್ಮಾನಿತರ ಪರಿಚಯವನ್ನು ಮಾಡಿದರು. ಕೋಶಾಧಿಕಾರಿ ಎ.ನಟರಾಜ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ಕುಮಾರ್ ವಂದಿಸಿದರು. ಬಳಿಕ ಕೋಟ ನರಸಿಂಹ ತುಂಗರ ನಿರ್ದೇಶನದಲ್ಲಿ ಮಂಡಳಿಯ ಬಾಲ ಕಲಾವಿದರಿಂದ ಶಶಿಪ್ರಭಾ ಪರಿಣಯ ಹಾಗೂ ಕೆ.ಜೆ.ಗಣೇಶ್ ನಿರ್ದೇಶನದಲ್ಲಿ ಮಂಡಳಿಯ ಸದಸ್ಯರಿಂದ ಬಭ್ರು ವಾಹನ ಕಾಳಗ ಯಕ್ಷಗಾನ ಪ್ರದರ್ಶನಗೊಂಡಿತು.







