ತೆರಿಗೆ ಮಾತ್ರವಲ್ಲ ಬರದಲ್ಲೂ ಕರ್ನಾಟಕಕ್ಕೆ ಅನ್ಯಾಯ: ಸಚಿವ ಕೆ.ಜೆ.ಜಾರ್ಜ್

ಉಡುಪಿ, ಫೆ.5: ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ತೆರಿಗೆ ವಿಚಾರದಲ್ಲಿ ಮಾತ್ರ ಬರದಲ್ಲೂ ಕರ್ನಾಟಕಕ್ಕೆ ಅನ್ಯಾಯ ಆಗಿದೆ. ಈ ಸಂಬಂಧ ವರದಿ ಸಿದ್ಧ ಪಡಿಸಿ ಸಲ್ಲಿಸಿದರೂ ಈವರೆಗೆ ಒಂದು ಸಭೆ ಕೂಡ ಕರೆದಿಲ್ಲ. ನಾವು ಇದರ ವಿರುದ್ಧ ಫೆ.7ರಂದು ಪ್ರತಿಭಟನೆ ಮಾಡುತ್ತೇವೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಉಡುಪಿಯಲ್ಲಿಂದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕಕ್ಕೆ ಯಾಕೆ ಅನ್ಯಾಯ ಮಾಡುತ್ತಿದ್ದಾರೆಂದು ಬಿಜೆಪಿ ನಾಯಕರನ್ನೇ ಕೇಳಬೇಕು. ಬಿಜೆಪಿ ಸಂಸದರು, ಕೇಂದ್ರ ಸಚಿವರು ಆಸಕ್ತಿ ವಹಿಸಿ ಹಣ ಬಿಡುಗಡೆ ಮಾಡಬೇಕು. ಜನರು ನಮಗೆ ಮಾತ್ರವಲ್ಲ, ಅವರಿಗೂ ಮತ ಹಾಕಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ ಜೊತೆ ಮಾತಾಡಲು ಸಂಸದರಿಗೆ ಭಯ ಆಗುತ್ತಿದೆ. ಮೋದಿ , ಗೃಹ ಸಚಿವರ ಮುಂದೆ ನಿಂತು ಕೇಳುವ ಧೈರ್ಯ ಸ್ಥೈರ್ಯ ಅವರಿಗೆ ಇಲ್ಲ ಎಂದು ಟೀಕಿಸಿದರು.
ಕರ್ನಾಟಕ ಸರಕಾರ ಹಣ ಬಿಡುಗಡೆ ಮಾಡಿರುವ ಬಗ್ಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಗೆ ಮಾಹಿತಿ ಇದ್ದಂತಿಲ್ಲ. ರಾಜ್ಯ ಸರಕಾರ ಈಗಾಗಲೇ ಕೈಲಾದಷ್ಟು ಅನುದಾನ ಬಿಡುಗಡೆ ಮಾಡಿ ಹಂಚಿದೆ. ನಾವು ಕೊಟ್ಟ ತೆರಿಗೆಯಲ್ಲಿ ಸಹಾಯ ಕೇಳುತ್ತಿದ್ದೇವೆ ನಿಯಮ ಪ್ರಕಾರ ಅನುದಾನ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಕಾಂಗ್ರೆಸ್ ಕೇವಲ ಚುನಾವಣೆ ಬರುವಾಗ ಮಾತ್ರ ತಯಾರಾಗುವ ಪಕ್ಷ ಅಲ್ಲ. ಸತತ ಜನರ ನಡುವೆ ಇದ್ದು ನಾವು ಚುನಾ ವಣೆ ಎದುರಿಸ್ತೇವೆ. ಜನರಿಗೆ ಪಕ್ಷ ಕೊಟ್ಟ ಭರವಸೆ ಈಡೇರಿಸಲಾಗಿದೆ ಎಂದು ಅವರು ತಿಳಿಸಿದರು. ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಪಕ್ಷ ಸೇರ್ಪಡೆ ವಿಚಾರ ಹೈಕಮಾಂಡ್‌ಗೆ ಬಿಟ್ಟದ್ದು. ಕರಾವಳಿ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಕೆಲವೊಂದು ಕಾರಣದಿಂದ ಬಿಜೆಪಿ ಜೊತೆ ಹೋಗಿರಬಹುದು. ಈ ಬಾರಿ ಚುನಾವಣೆಯಲ್ಲಿ ಜನ ನಮ್ಮ ಕೈ ಹಿಡಿಯುತ್ತಾರೆ ಎಂಬ ನಂಬಿಕೆ ಇದೆ ಎಂದು ಸಚಿವ ಜಾರ್ಜ್ ಹೇಳಿದರು.







