ನಮ್ಮೊಳಗಿನ ದೇವರನ್ನು ಗುರುತಿಸಿ ಸೌಹಾರ್ದತೆಯಿಂದ ಬದುಕೋಣ: ನಾದ ಮಣಿನಾಲ್ಕೂರು

ಉಡುಪಿ: ನಮ್ಮ ಎಲುಬಿನ ಹಂದರದಲ್ಲಿಯೇ ಮಂದಿರವಿದೆ. ಅಲ್ಲಿ ನಾವು ಆರಾಧಿಸುವ ದೇವರಿದ್ದಾನೆ. ಅವನನ್ನು ಹೊರ ಗೆಲ್ಲೋ ಹುಡುಕುವ ವ್ಯರ್ಥ ಪ್ರಯತ್ನ ಮಾಡುವ ಬದಲು, ನಮ್ಮೊಳಗೇ ಇರುವ ರಾಮನನ್ನು, ಅಲ್ಲಾನನ್ನು ಮತ್ತು ಯೇಸು ವನ್ನು ಕಂಡುಕೊಂಡು ಸೌಹಾರ್ದತೆಯಿಂದ ಬದುಕಬೇಕು ಎಂದು ಏಕತಾರಿ ಗಾಯಕರಾದ ನಾದ ಮಣಿನಾಲ್ಕೂರ್ ಹೇಳಿದ್ದಾರೆ.
ಮಣಿಪಾಲ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ ಸೌಹಾರ್ದ ಗೀತೆಗಳ ಗಾಯನ ಮತ್ತು ಮಾತುಕತೆಯನ್ನು ನಡೆಸಿಕೊಟ್ಟ ಅವರು ಕವಿ ಮೂಡ್ನಾಕೋಡು ಚಿನ್ನಾಸ್ವಾಮಿ ಅವರ ಈ ಕವಿತೆಯನ್ನು ಹಾಡುತ್ತಾ ಈ ಮಾತುಗಳನ್ನು ಹೇಳಿದರು.
ನೆರೆದ ಮಕ್ಕಳಲ್ಲಿ ಕನಸುಗಾರರಾಗಿ, ಕನಸು ನನಸು ಮಾಡುವಂತ ಹುಡುಗ ಹುಡುಗಿಯರಾಗಿ ಎಂದು ಅವರು ಹಾಡು ಗಳನ್ನು ಹಾಡಿದರು. ನಾಡಿನ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಅನೇಕ ಗೀತೆಗಳನ್ನು ಪ್ರಸ್ತುತ ಪಡಿಸಿದ ಅವರು ಸಂಗೀತದ ಮೂಲಕ ಮನಸ್ಸನ್ನು ಪರಿವರ್ತಿಸಿ ಉತ್ತಮ ಸಮಾಜವನ್ನು ನಿರ್ಮಿಸುವ ಸಣ್ಣ ಪ್ರಯತ್ನ ತನ್ನದು ಎಂದರು.
2018ರಿಂದ ಕರ್ನಾಟಕದಾದ್ಯಂತ ಸಂಚರಿಸುತ್ತಾ ತಮ್ಮ ಭಾವೈಕ್ಯ ಹಾಡುಗಳ ಮೂಲಕ ಮನೆ ಮಾತಾಗಿರುವ ನಾದ ಮಣಿನಾಲ್ಕೂರು ಅವರು ಒಂಬತ್ತು ವರ್ಷಗಳಿಂದ ಕತ್ತಲ ಹಾಡು, ಏಳು ವರ್ಷಗಳಿಂದ ತತ್ವ ಮತ್ತು ಅನುಭಾವಿ ಹಾಡು ಗಳೊಂದಿಗೆ ಪ್ರಯಾಣವನ್ನು ನಡೆಸಿದ್ಧಾರೆ.
ಈ ಸಂದರ್ಭದಲ್ಲಿ ತೋರು ಸದ್ಗುರುವೇ, ಮಣ್ಣಿಗೆ ವಂದನೆ ಮುಗಿಲಿಗೆ ವಂದನೆ, ಕನಸುಗಾರರು ನಾವು ಕನಸುಗಾರರು, ಏಕಾಂಗಿಯಾಗಿ ಹೊರಡು ಹಾಗೂ ಇನ್ನೂ ಅನೇಕ ಹಾಡುಗಳನ್ನು ಪ್ರಸ್ತುತ ಪಡಿಸಿದರು.
ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಇದೇ ಸಂದರ್ಭದಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ.ಐಡಾ, ಅಧ್ಯಾಪಕಿ ಲಕ್ಷ್ಮಿ, ಲೇಖಕ ಸುಬ್ರಮಣ್ಯ ಬಾಸ್ರಿ, ಅಕಾಡೆಮಿ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







