ಪಿಎಂ ಸ್ವನಿಧಿ ಯೋಜನೆಯಲ್ಲಿ ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ
ವಿವಿಧ ಯೋಜನೆಗಳ ಅರ್ಜಿಗಳಿಗೆ ಶೀಘ್ರ ನೆರವು ಒದಗಿಸಿ: ಸಿಇಓ

ಉಡುಪಿ: ಕೇಂದ್ರದ ಪ್ರದಾನಮಂತ್ರಿ ಸ್ವನಿಧಿ ಯೋಜನೆಯಲ್ಲಿ ಜಿಲ್ಲೆಯ ಬ್ಯಾಂಕುಗಳು ಅತ್ಯುತ್ತಮ ಸಾಧನೆ ತೋರಿದ್ದು, ಶೇ.138ರಷ್ಟು ಸಾಧನೆಯೊಂದಿಗೆ ಇಡೀ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಪ್ರಥಮ ಕಂತಿನಲ್ಲಿ 4462 ಮಂದಿ ಬೀದಿ ವ್ಯಾಪಾರಿಗಳಿಗೆ ಆರ್ಥಿಕ ನೆರವನ್ನು ನೀಡುವ ಮೂಲಕ ಬ್ಯಾಂಕ್‌ಗಳಿಗಿದ್ದ 2819ರ ಗುರಿಯನ್ನು ಮೀರಿದ ಸಾಧನೆ ಮಾಡಿದೆ ಎಂದು ಜಿಲ್ಲೆಯ ಮುಂಚೂಣಿ ಬ್ಯಾಂಕ್ ಆದ ಕೆನರಾ ಬ್ಯಾಂಕ್‌ನ ರೀಜನಲ್ ಮ್ಯಾನೇಜರ್ ಶೀಬಾ ಶೆಹಜಾನ್ ತಿಳಿಸಿದ್ದಾರೆ.
ಮಣಿಪಾಲದಲ್ಲಿರುವ ಉಡುಪಿ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಪ್ರತೀಕ್ ಬಾಯಲ್ ಅಧ್ಯಕ್ಷತೆಯಲ್ಲಿ ನಡೆದ ಲೀಡ್ ಬ್ಯಾಂಕ್‌ನ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಜಿಲ್ಲೆಯ ಬ್ಯಾಂಕುಗಳು 2022-23ನೇ ಸಾಲಿನ ಆರ್ಥಿಕ ವರ್ಷದ ಕೊನೆಯ ಮೂರು ತಿಂಗಳುಗಳಲ್ಲಿ ಸಾಧಿಸಿದ ಪ್ರಗತಿಯ ವರದಿಯನ್ನು ಸಭೆಯ ಮುಂದಿರಿಸಿ ಮಾತನಾಡುತಿದ್ದರು.
ಇದೇ ಅವಧಿಯ ಎರಡನೇ ಹಂತದಲ್ಲಿ 2101 ಮಂದಿಗೆ ಸಾಲ ನೀಡುವ ಗುರಿ ಇದ್ದು, ಇದುವರೆಗೆ 2504 ಬೀದಿ ವ್ಯಾಪಾರಿ ಗಳಿಗೆ ಸಾಲವನ್ನು ಮಂಜೂರು ಮಾಡಲಾಗಿದೆ. ಇನ್ನೂ ಬಾಕಿ ಉಳಿದಿರುವ 390 ಅರ್ಜಿಗಳನ್ನು ಆದ್ಯತೆಯ ಮೇಲೆ ಪರಿಗಣಿಸಿ ಸಾಲವನ್ನು ವಿತರಿಸುವ ಮೂಲಕ ಜಿಲ್ಲೆ ಅಗ್ರಸ್ಥಾನದಲ್ಲಿ ಉಳಿಯುವಂತೆ ನೋಡಿಕೊಳ್ಳಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಧಾನಮಂತ್ರಿ ಉದ್ಯೋಗ ಸೃಜನಾ ಯೋಜನೆಯಡಿ ಜಿಲ್ಲೆಗಿದ್ದ 173 ಗುರಿಯನ್ನು ಮೀರಿ ಒಟ್ಟು 374 ಮಂದಿ ಉದ್ಯಮಿಗಳಿಗೆ ಒಟ್ಟು 40.18 ಕೋಟಿ ರೂ. ಸಲವನ್ನು ವಿತರಿಸಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಉದ್ಯೋಗಾವಕಾಶ ಸೃಜಿಸಲು ಬ್ಯಾಂಕುಗಳು ಬೆಂಬಲವನ್ನು ನೀಡಿವೆ ಎಂದು ಸಂಬಂಧಿತ ಅಧಿಕಾರಿಗಳನ್ನು ಅಭಿನಂದಿಸಿದರು.
ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ಮೂರು ತಿಂಗಳ ಬ್ಯಾಂಕುಗಳ ಸಾಧನೆಯ ಕುರಿತಂತೆ ವಿವರಿಸಿದ ಶೀಬಾ, ಜಿಲ್ಲೆಯ ಬ್ಯಾಂಕುಗಳ ಒಟ್ಟಾರೆ ವ್ಯವಹಾರ 56,191 ಕೋಟಿ ರೂ.ಗಳಿಗೆ ಏರಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 6107 ಕೋಟಿ ರೂ.ಹೆಚ್ಚಿನ ವ್ಯವಹಾರ ನಡೆಸಿ ಶೇ.12.19ರಷ್ಟು ಹೆಚ್ಚಿನ ಸಾಧನೆ ಮಾಡಿದೆ ಎಂದರು.
ಈ ಅವಧಿಯಲ್ಲಿ ಬ್ಯಾಂಕುಗಳ ಠೇವಣಿ 37,863 ಕೋಟಿ ರೂ.ಗೆ ಕಳೆದ ವರ್ಷಕ್ಕೆ ಹೋಲಿಸಿದರೆ 3743 ಕೋಟಿ ರೂ.(ಶೇ.10.97) ಕೋಟಿ ರೂ. ಹೆಚ್ಚಳವಾಗಿದೆ.ಅದೇ ರೀತಿ ಸಾಲ ನೀಡಿಕೆಯೂ 18,328 ಕೋಟಿ ರೂ.ಗಳಾಗಿದ್ದು ಇದೂ ಸಹ ಕಳೆದ ವರ್ಷಕ್ಕಿಂತ 2364 ಕೋಟಿ ಅಧಿಕವಾಗಿದ್ದು ಶೇ.14.81ರಷ್ಟು ಹೆಚ್ಚಳ ಕಂಡಿದೆ ಎಂದರು.
ಕಳೆದ ಮೂರು ತಿಂಗಳ ಅವಧಿಯಲ್ಲಿ ಜಿಲ್ಲೆಯ ಠೇವಣಿ-ಸಾಲದ ಸಿಡಿ ಅನುಪಾತ ಶೇ.1.62ರಷ್ಟು ಹೆಚ್ಚಿದ್ದು, ಅದೀಗ ಶೇ.48.41ರಷ್ಟಿದೆ. ಆದರೆ ಅಪೇಕ್ಷಿತ ಸಿಡಿ ಅನುಪಾತ ಶೇ.60ನ್ನು ಸಾಧಿಸಲು ಪ್ರತಿಯೊಂದು ಬ್ಯಾಂಕುಗಳು ಪ್ರಯತ್ನಿಸಬೇಕಾಗಿದೆ ಎಂದವರು ತಿಳಿಸಿದರು.
ಜಿಲ್ಲೆಯಲ್ಲಿ ಕೃಷಿ ಕ್ಷೇತ್ರ್ಕೆ 3967 ಕೋಟಿ ರೂ.ಸಾಲ ವಿತರಿಸುವ ಮೂಲಕ ಶೇ.72ರಷ್ಟು, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಿಗೆ 3843 ಕೋಟಿ ರೂ.ಸಾಲ ವಿತರಿಸಿ ಶೇ.112ರಷ್ಟು ಸಾಧನೆ ಮಾಡಲಾಗಿದೆ. ವಿಶೇಷ ಕಾರ್ಯಕ್ರಮದಡಿ ದುರ್ಬಲ ವಲಯಕ್ಕೆ 2661 ಕೋಟಿ ರೂ, ಉನ್ನತ ವ್ಯಾಸಂಗ ಮಾಡಲು ವಿದ್ಯಾರ್ಥಿಗಳಿಗೆ 545 ಕೋಟಿ ರೂ., ವಸತಿ ವಲಯಗಳ ಸುಸ್ಥಿರ ಅಭಿವೃದ್ಧಿಗೆ 2015 ಕೋಟಿ ರೂ. ಗಳ ಸಾಲ ವಿತರಣೆ ಮಾಡಲಾಗಿದೆ ಎಂದು ವಿವರಿಸಿದರು.
ಕೇಂದ್ರ ಸರಕಾರದ ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯಲ್ಲಿ ಬ್ಯಾಂಕು ಗಳು ಸಕ್ರಿಯವಾಗಿ ಭಾಗವಸಿದ್ದು, ಕೇಂದ್ರದ ವಿವಿಧ ಯೋಜನೆಗಳ ಕುರಿತು ಎಲ್ಲಾ 155 ಗ್ರಾಮ ಪಂಚಾಯತ್ ಮತ್ತು 11 ನಗರ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಮಾಹಿತಿ ಒದಗಿಸಿ, ಯೋಜನೆಗಳ ಪ್ರಯೋಜನ ಪಡೆಯಲು ಸಹಕರಿಸಲಾಗಿದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಪಂ ಸಿಇಓ ಪ್ರತೀಕ್ ಬಾಯಲ್ ಮಾತನಾಡಿ, ಪ್ರಧಾನಮಂತ್ರಿ ಉದ್ಯೋಗ ಸೃಜನಾ ಯೋಜನೆಯಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಆರ್ಥಿಕ ನೆರವು ಒದಗಿಸಲು ಕೈಗಾರಿಕಾ ಇಲಾಖೆಗಳಿಂದ ಶಿಫಾರಸು ಮಾಡಿದ ಅರ್ಜಿದಾರ ರಿಗೆ ಬ್ಯಾಂಕುಗಳು ಶೀಘ್ರವಾಗಿ ನೆರವು ಒದಗಿಸಬೇಕು ಎಂದು ಬ್ಯಾಂಕಿಂಗ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇನ್ನುಳಿದ ಅರ್ಜಿಗಳನ್ನು ಆದ್ಯತೆಯ ಮೇಲೆ ವಿಲೇವಾರಿ ಮಾಡಿ, ಅರ್ಹ ಫಲಾನುಭವಿ ಉದ್ಯಮಿಗಳಿಗೆ ಸಬ್ಸಿಡಿಯನ್ನು ಶೀಘ್ರವಾಗಿ ವಿತರಿಸುವಂತೆ ಯೂ ಅವರು ಸೂಚನೆ ನೀಡಿದರು.
ಸಭೆಯಲ್ಲಿ ಬೆಂಗಳೂರು ವಲಯದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಎಕ್ಸಿಕ್ಯೂಟಿವ್ ಅಧಿಕಾರಿ ಮುರಳಿ ಮೋಹನ್ ಪಾಠಕ್, ಎಸ್‌ಸಿಡಿಸಿಸಿ ಬ್ಯಾಂಕ್‌ನ ಸಹಾಯಕ ಉಪ ಪ್ರಬಂಧಕ ನಿತ್ಯಾನಂದ ಶೇರಿಗಾರ್ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲೆಯ ಲೀಡ್ ಬ್ಯಾಂಕ್ ಮ್ಯಾನೇಜರ್ ಪಿ.ಎಂ ಪಿಂಜಾರ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.







