ಮಲ್ಪೆ-ಆದಿಉಡುಪಿ ರಸ್ತೆ ಕಾಮಗಾರಿ ಅವೈಜ್ಞಾವಿಕ ಸರ್ವೆ ಕಾರ್ಯಕ್ಕೆ ವಿರೋಧ: ಮರುಪರಿಶೀಲನೆಗೆ ಆಗ್ರಹ

ಮಲ್ಪೆ, ಫೆ.10: ಮಲ್ಪೆ-ಆದಿಉಡುಪಿ ರಸ್ತೆ(ಎನ್‌ಎಚ್169ಎ) ಅಗಲೀಕರಣ ಯೋಜನೆ ಸಂಬಂಧಿಸಿ ಸಾರ್ವಜನಿಕರು, ಜಾಗ ಬಿಟ್ಟುಕೊಡುವ ಸಂತ್ರಸ್ತರನ್ನು ಒಳಗೊಂಡ ‘ಮಲ್ಪೆ-ಆದಿಉಡುಪಿ ನಾಗರಿಕ ಕ್ರಿಯಾ ವೇದಿಕೆ’ ಎಂಬ ಸಮಿತಿ ಯನ್ನು ರಚಿ ಸಿದ್ದು, ಈ ಮೂಲಕ ಬೇಡಿಕೆ ಈಡೇರಿಸುವ ಹೋರಾಟ ಮತ್ತು ಅಧಿಕಾರಿ ಜನಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲು ತೀರ್ಮಾನಿಸ ಲಾಯಿತು.
ರಸ್ತೆ ಅಗಲೀಕರಣ ಯೋಜನೆ ವಿಳಂಬಕ್ಕೆ ಸಂಬಂಧಿಸಿ ಮಲ್ಪೆ ಏಳೂರು ಮೊಗವೀರ ಭವನದಲ್ಲಿ ಶನಿವಾರ ನಡೆದ ಪ್ರತಿಭಟನಾ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಸಂತ್ರಸ್ತರಿಗೆ ನೀಡಬೇಕಾದ ಪರಿಹಾರ ಮತ್ತು ಅವೈಜ್ಞಾನಿಕ ಸಮೀಕ್ಷೆ ಕಾರ್ಯದ ಬಗ್ಗೆ ಪರಿಸರದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಮಲ್ಪೆ-ಬೈಪಾಸ್ ರಸ್ತೆಯಲ್ಲಿ ಸ್ಥಳೀಯರು, ಪ್ರವಾಸೀಗರು, ಶಾಲಾ ವಾಹನಗಳು ಸಹಿತ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ವಾರಾಂತ್ಯದಲ್ಲಿ ಇಲ್ಲಿನ ವಾಹನ ದಟ್ಟಣೆಯಿಂದ ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಅನುಭವಿಸು ವಂತಾಗಿದೆ ಎಂದು ಸಭೆಯಲ್ಲಿ ಸಾರ್ವಜನಿಕರು ದೂರಿದರು. ರಸ್ತೆ ನಿರ್ಮಾಣಕ್ಕೆ ಯಾವುದೇ ವಿರೋಧ ಇಲ್ಲ. ಆದರೆ ಕನಿಷ್ಠ ಪರಿಹಾರ ನೀಡುತ್ತಿರುವ ಬಗ್ಗೆ ಮತ್ತೆ ಪರಿಶೀಲನೆ ನಡೆಸಬೇಕು. ಸರ್ವೇ, ಅಳತೆ ಪ್ರಕ್ರಿಯೆ ಸರಿಯಾಗಿ ಮಾಡಿಲ್ಲ. ಇದನ್ನು ಸರಿಪಡಿಸಬೇಕು ಮತ್ತು ನ್ಯಾಯಯುತ ಬೆಲೆಯಲ್ಲಿ ಪರಿಹಾರ ನೀಡಬೇಕು ಸಂತ್ರಸ್ತರು ಒತ್ತಾಯಿಸಿದರು.
ಸಮೀಕ್ಷೆ ವ್ಯವಸ್ಥಿತವಾಗಿ ಪೂರ್ಣಗೊಳಿಸಿ, ಪರಿಹಾರವನ್ನು ಸರಿಯಾಗಿ ನೀಡಬೇಕು. 15 ಮೀಟರ್ ವ್ಯಾಪ್ತಿಯಲ್ಲೇ ರಸ್ತೆ ನಿರ್ಮಾಣ ಕಾಮಗಾರಿ ಶೀಘ್ರ ಆರಂಭಿಸಬೇಕು. ಶೀಘ್ರವೆ ಸಂಸದರು, ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆಗೆ ಸಭೆ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ಮೀನುಗಾರ ಸಂಘದ ಅಧ್ಯಕ್ಷ ದಯಾನಂದ್ ಕೆ.ಸುವರ್ಣ, ಮುಖಂಡರಾದ ಸಾಧು ಸಾಲ್ಯಾನ್, ಸುಭಾಷ್ ಮೆಂಡನ್, ರತ್ನಾಕರ್ ಸಾಲ್ಯಾನ್, ನಾಗರಾಜ್ ಸುವರ್ಣ, ಜಗನ್ನಾಥ್ ಕಡೇಕಾರ್, ಕಿಶೋರ್ ಡಿ. ಸುವರ್ಣ, ಸುಧಾಕರ್ ಕಲ್ಮಾಡಿ, ಓಬು ಪೂಜಾರಿ, ಗಣೇಶ್ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.







