ಧರ್ಮದ ಕವಚದಡಿ ಬಿಜೆಪಿಯಿಂದ ಪಾಪದ, ಅನ್ಯಾಯದ ಕೆಲಸ: ಸಚಿವ ದಿನೇಶ್ ಗುಂಡೂರಾವ್ ಆರೋಪ

ಉಡುಪಿ: ಬಿಜೆಪಿಗರು ಅತ್ಯಂತ ಬುದ್ಧಿವಂತಿಕೆಯಿಂದ ಧರ್ಮದ ಕವಚದ ಅಡಿಯಲ್ಲಿ ಪಾಪದ, ಅನ್ಯಾಯದ ಕೆಲಸ ಮಾಡುತಿ ದ್ದಾರೆ. ನಮ್ಮ ಸಂವಿಧಾನವನ್ನೇ ತಿರುಚುವ ಕೆಲಸವನ್ನು ಮಾಡುತಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತಿದ್ದ ಅವರು, ಇಂದು ಎಲ್ಲೆಡೆಯಲ್ಲೂ ಪ್ರಜಾಪ್ರಭುತ್ವ ಕುಸಿಯುತ್ತಿದೆ. ಮೂಲ ಪ್ರಶ್ನೆ ಜನರ ತಲೆಗೆ ಹೋಗದಂತೆ ಭಾವನೆಗಳಲ್ಲಿ ಅವುಗಳನ್ನು ಮುಚ್ಚಿ ಹಾಕಲಾಗುತ್ತಿದೆ. ಹೀಗಾಗಿ ಪ್ರಜಾಪ್ರ ಭುತ್ವಕ್ಕೆ ಎದುರಾಗಿರುವ ಅಪಾಯ, ಅದು ಕುಸಿಯುತ್ತಿರುವುದು ಜನರಿಗೆ ಗೊತ್ತಾಗುತ್ತಿಲ್ಲ. ಅದನ್ನು ಯಾರೂ ಸಹ ಪ್ರಶ್ನೆ ಮಾಡುತ್ತಿಲ್ಲ ಎಂದರು.
ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ನೀಡುತ್ತಿರುವ ಪ್ರಚೋದನಕಾರಿ ಹೇಳಿಕೆಗಳ ಕುರಿತು ಪ್ರಶ್ನಿಸಿದಾಗ, ಪ್ರಚೋದನಕಾರಿ ಹಾಗೂ ಹೊಡೆಬಡಿ ಹೇಳಿಕೆಗಳ ಮೂಲಕ ಅವರು ಸಮಾಜ ವ್ಯವಸ್ಥೆಗೆ ಧಕ್ಕೆ ತರುತಿದ್ದಾರೆ. ಇದೇನೂ ಅವರು ಪ್ರಥಮ ಬಾರಿಗೆ ಹೇಳುತ್ತಿರುವುದಲ್ಲ. ಪದೇ ಪದೇ ಇಂಥ ಹೇಳಿಕೆ ನೀಡುತಿದ್ದಾರೆ. ಇಂಥವರು ಬಿಜೆಪಿಯಲ್ಲಿ ಪ್ರಮುಖ ನಾಯಕರಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಇಂಥ ಹೇಳಿಕೆಗಳ ಮೂಲಕ ಸಮಾಜವನ್ನು ಸದಾ ಆತಂಕದಲ್ಲಿ ಇಡುವುದು ಈಶ್ವರಪ್ಪ ಅವರ ಉದ್ದೇಶವಾಗಿದೆ. ಅವರಿಗೆ ಇದೇ ಲಾಭ. ಜನರ ಭಾವನೆ ಕೆರಳಿಸಿ ಮತಗಳಿಸುವ ಉದ್ದೇಶ. ಕೋಮು ಭಾವನೆಯನ್ನು ಪ್ರಚೋದಿಸಿ ಮತ ಗಳಿಸುವ ಗುರಿ ಅವರದು ಎಂದು ದಿನೇಶ್ ಗುಂಡೂರಾವ್ ನುಡಿದರು.
ಬಿಜೆಪಿಗರು ಧರ್ಮ, ಜಾತಿ, ಭಾಷೆಯ ಆಧಾರದಲ್ಲಿ ಜನರ ಭಾವನೆಗಳನ್ನು ಕೆರಳಿಸುತಿದ್ದಾರೆ. ಈ ಮೂಲಕ ಸಮಾಜ ವ್ಯವಸ್ಥೆಯನ್ನೇ ಕೆಡಿಸಿಬಿಟ್ಟಿದ್ದಾರೆ. ಇವರೆಲ್ಲರೂ ಜೈಶ್ರೀರಾಮ್ ಎಂದು ಕೂಗಬಹುದು. ಆದರೆ ಅವರಿಗೆ ಇದರಲ್ಲಿ ನಂಬಿಕೆ ಇರುವುದಿಲ್ಲ. ಅದನ್ನು ಎಷ್ಟು ಮಂದಿ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ ಎಂಬುದನ್ನು ನೋಡಿದರೆ ಇದು ಗೊತ್ತಾಗುತ್ತೆ ಎಂದರು.
ಪ್ರಿಯಾಂಕ ಖರ್ಗೆ ವಿರುದ್ಧ ಈಶ್ವರಪ್ಪ ನೀಡಿದ ಹೇಳಿಕೆಗೆ ಕುರಿತು ಕೇಳಿದಾಗ, ಈ ತರದ ಹೇಳಿಕೆ ನೀಡುವ ಬಹಳಷ್ಟು ನಾಯಕರ ದಂಡೇ ಬಿಜೆಪಿಯಲ್ಲಿದೆ. ಸಿ.ಟಿ.ರವಿ, ಸುನಿಲ್‌ಕುಮಾರ್, ಅನಂತಕುಮಾರ ಹೆಗ್ಡೆ, ಈಶ್ವರಪ್ಪ, ಶೋಭಾ, ಪ್ರತಾಪ್‌ಸಿಂಹ ಹೀಗೆ ದೊಡ್ಡ ಪಟ್ಟಿಯೇ ಬಿಜೆಪಿಯಲ್ಲಿದೆ.
ಪ್ರಚೋದನಕಾರಿ ವೈಷಮ್ಯ ಸೃಷ್ಟಿ ಮಾಡುವುದೇ ಇವರ ಕೆಲಸ. ಇದನ್ನು ಉದ್ದೇಶಪೂರ್ವಕವಾಗಿ ಜನರ ನಡುವೆ ಘರ್ಷಣೆ ಸೃಷ್ಟಿಸಲು ಇದನ್ನು ಬಳಸುತ್ತಾರೆ. ಆದರೆ ಇವರ್ಯಾರೂ ಸಮಾಜದಲ್ಲಿ ಆರೋಗ್ಯಕರ ಚರ್ಚೆಗೆ ಬರುವುದೇ ಇಲ್ಲ. ಆರೋಗ್ಯ, ಶಿಕ್ಷಣ, ಆರ್ಥಿಕ ಪರಿಸ್ಥಿತಿ, ತೆರಿಗೆ ವಿಷಯ, ನಿರುದ್ಯೋಗದ ಬಗ್ಗೆ, ನೈಜ ಬದುಕಿನ ಬಗ್ಗೆ ಇವರು ಚರ್ಚೆ ಮಾಡುವುದೇ ಇಲ್ಲ, ಹೇಳಿಕೆ ನೀಡುವುದೇ ಇಲ್ಲ ಎಂದು ಹೇಳಿದರು.
ಬಿಜೆಪಿಯ ಆಡಳಿತದಡಿಯಲ್ಲಿ ಈಡಿ, ಐಟಿ, ಸಿಬಿಐ ಸ್ವತಂತ್ರ ಸಂಸ್ಥೆಗಳಾಗಿ ಉಳಿದಿಲ್ಲ. ಇವೆಲ್ಲವೂ ಬಿಜೆಪಿಯ ಸಂಸ್ಥೆಗಳಾ ಗಿವೆ. ಚುನಾವಣೆ ಹತ್ತಿರ ಬಂದಂತೆ ಇವುಗಳು ವಿಪಕ್ಷಗಳ ನಾಯಕರಿಗೆ ತೊಂದರೆ ನೀಡಲಾರಂಭಿಸುತ್ತವೆ. ದಿಲ್ಲಿ, ಜಾರ್ಖಂಡ್ ಸಿಎಂಗಳನ್ನು ಜೈಲಿಗೆ ಕಳುಹಿಸಲೂ ಪ್ರಯತ್ನ ನಡೆದಿದೆ ಎಂದವರು ಆರೋಪಿಸಿದರು.







