ಲೇ ಕೌನ್ಸಿಲಿಂಗ್ ತರಬೇತಿ ಕಾರ್ಯಾಗಾರ; ಮದ್ಯವ್ಯಸನ ಜಾಗೃತಿ ಸಪ್ತಾಹ ಉದ್ಘಾಟನೆ

ಉಡುಪಿ : ಉಡುಪಿ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆ, ಕಮಲ್ ಎ.ಬಾಳಿಗ ಚಾರಿಟೇಬಲ್ ಟ್ರಸ್ಟ್, ಒನ್‌ಗುಡ್ ಸ್ಟೆಪ್ ಬೆಂಗಳೂರು, ರೋಟರಿ ಮಣಿಪಾಲ ಮತ್ತು ಮಣಿಪಾಲ ಮಹಿಳಾ ಸಮಾಜ ಇವುಗಳ ಜಂಟಿ ಆಶ್ರಯದಲ್ಲಿ ಲೇ ಕೌನ್ಸಿಲಿಂಗ್ ತರಬೇತಿ ಕಾರ್ಯಾಗಾರದ ಎರಡನೇ ತಂಡ ಮತ್ತು ಮದ್ಯವ್ಯಸನ ಮಕ್ಕಳ ಜಾಗೃತಿ ಸಪ್ತಾಹದ ಉದ್ಘಾಟನೆ ರವಿವಾರ ಆಸ್ಪತ್ರೆಯ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮವನ್ನು ಉತ್ತರ ಕರ್ನಾಟಕದಿಂದ ಉಡುಪಿಗೆ ವಲಸೆ ಕಾರ್ಮಿಕ ರಾಗಿ ಬಂದ ಕುಟುಂಬದ ಸಿವಿಲ್ ಇಂಜಿನಿಯರ್ ಮಂಜುನಾಥ ಗೋದಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಉಡುಪಿಗೆ ಬಂದಾಗ ನನ್ನ ಬಾಲ್ಯ ತುಂಬಾ ಕಷ್ಟದಿಂದ ಕೂಡಿತ್ತು. ತಂದೆ ಕುಡಿತದ ಚಟಕ್ಕೆ ದಾಸರಾಗಿದ್ದು ಬಹುದೊಡ್ಡ ಕಷ್ಟ ಅನುಭವಿಸಬೇಕಾಯಿತು. ವಿದ್ಯಾಭ್ಯಾಸ ಮಾಡಲು ಮನಸಿದ್ದರೂ ತಂದೆಯ ಪ್ರೋತ್ಸಾಹ ಇರಲಿಲ್ಲ. ಉಡುಪಿಯ ರೂಪಾ ಬಲ್ಲಾಳ್ ಪ್ರೋತ್ಸಾಹದಿಂದ ಕಾಲೇಜು ವಿದ್ಯಾಭ್ಯಾಸ ಮುಗಿಸಿದೆ. ನಂತರ ಇಂಜಿನಿಯ ರಿಂಗ್ ಕಲಿತೆ. ತಂದೆ ಕುಡಿತದ ಚಟಕ್ಕೆ ಬಲಿಯಾಗಿದ್ದರ ಹೊರತಾಗಿಯೂ ತಾನು, ತುಂಬ ಸವಾಲಿನಿಂದ ವಿದ್ಯಾಭ್ಯಾಸವನ್ನು ಪೂರೈಸಿ ಈ ಹಂತಕ್ಕೆ ಬಂದೆ ಎಂದು ತಿಳಿಸಿದರು.
ಮದ್ಯಪಾನದಿಂದ ಕುಟುಂಬಕ್ಕೆ ಆಗುವ ಸಮಸ್ಯೆಗಳ ಕುರಿತ ಕಲಾವಿದ ವೆಂಕಿ ಪಲಿಮಾರ್ ಆವೆಮಣ್ಣಿನಿಂದ ರಚಿಸಿರುವ ಕಲಾಕೃತಿಯನ್ನು ಮಣಿಪಾಲ ಮಹಿಳಾ ಸಮಾಜದ ಅಧ್ಯಕ್ಷೆ ಹಾಗೂ ಮಣಿಪಾಲ ಕೆಎಂಸಿಯ ನೇತ್ರತಜ್ಞೆ ಡಾ.ಸುಲತಾ ಭಂಡಾರಿ ಮತ್ತು ಮದ್ಯಪಾನದಿಂದ ಆಗುವ ದೈಹಿಕ ಮತ್ತು ಮಾನಸಿಕ ಕಾಯಿಲೆಗಳ ಕುರಿತ ಕಲಾವಿದ ಶ್ರೀನಾಥ್ ಮಣಿಪಾಲ್ ಬಿಡಿಸಿರುವ ಚಿತ್ರವನ್ನು ಒನ್‌ಗುಡ್ ಸ್ಟೆಪ್‌ನ ಸಂಸ್ಥಾಪಕಿ ಅಮಿತಾ ಪೈ ಅನಾವರಣಗೊಳಿಸಿದರು.
ಸಮಾಜಕ್ಕೆ ಕಾಯಿಲೆಗಳ ಕುರಿತು ಮಾಹಿತಿಯನ್ನು ನೀಡಲು ಡಾ.ವಿರೂಪಾಕ್ಷ ದೇವರಮನೆ ಆರಂಭಿಸಿರುವ ಡಾಕ್ಟರ್ ದೇವರ ಮನೆ ಟಾಕ್ಸ್ ಎಂಬ ಯೂ ಟ್ಯೂಬ್ ಚಾನೆಲ್‌ನ್ನು ಅಧ್ಯಕ್ಷತೆ ವಹಿಸಿದ್ದ ಡಾ.ಎ.ವಿ.ಬಾಳಿಗ ಸಮೂಹ ಸಂಸ್ಥೆಗಳ ವೈದ್ಯಕೀಯ ನಿರ್ದೇಶಕ ಮತ್ತು ಮನೋವೈದ್ಯ ಡಾ.ಪಿ.ವಿ.ಭಂಡಾರಿ ಅನಾವರಣಗೊಳಿಸಿದರು.
ಮಣಿಪಾಲ ರೋಟರಿಯ ಶ್ರೀಪತಿ ಪೂಜಾರಿ ಮುಖ್ಯ ಉಪಸ್ಥಿತರಿದ್ದರು. ಮನೋ ವೈದ್ಯ ಡಾವಿರೂಪಾಕ್ಷ ದೇವರಮನೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ವಂದಿಸಿದರು. ಆಪ್ತ ಸಮಾಲೋಚಕಿ ದೀಪಶ್ರೀ ಕಾರ್ಯಕ್ರಮ ನಿರೂಪಿಸಿದರು. ನಂತರ ಮಾಹಿತಿ ಕಾರ್ಯಾಗಾರ ನಡೆಯಿತು.







