ದೇವರಿಗಿಂತ ಜನರ ಬದುಕಿನ ರಕ್ಷಣೆ ಇಂದಿನ ಅಗತ್ಯ: ಮುನೀರ್ ಕಾಟಿಪಳ್ಳ
ಉಡುಪಿ ಡಿವೈಎಫ್‌ಐಯ ಯುವಜನ ಸಮಾವೇಶ ಉದ್ಘಾಟನೆ

ಉಡುಪಿ: ಯಾವುದೇ ಕಾರಣಕ್ಕೆ ಯುವಜನತೆ ಛಿದ್ರಕಾರಿಗಳ ಬಲೆಗೆ ಬೀಳಬಾರದು. ಧರ್ಮರಕ್ಷಣೆ ಎಂಬುದು ಕೇವಲ ಬೋಗಸ್. ದೇವರನ್ನು ನಾವು ರಕ್ಷಣೆ ಮಾಡಲು ಎಂದಿಗೂ ಸಾಧ್ಯವಿಲ್ಲ. ಬೆಳಗ್ಗೆ ಎದ್ದು ದೇವರೇ ಕಾಪಾಡು ಎಂದು ಹೇಳಿ ಪ್ರಾರ್ಥಿಸಿ, ನಂತರ ಬೀದಿಯಲ್ಲಿ ನಿಂತು ದೇವರನ್ನು ರಕ್ಷಣೆ ಮಾಡುತ್ತೇವೆ ಎಂದು ಹೇಳುವುದು ದೊಡ್ಡ ಮೋಸ. ನಾವು ದೇವರ ರಕ್ಷಣೆಗಿಂತ ಜನರ ಹಾಗೂ ನಮ್ಮ ಬದುಕಿನ ರಕ್ಷಣೆ ಮಾಡಬೇಕಾಗಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‌ಐ) ಉಡುಪಿ ಜಿಲ್ಲೆ ಇದರ ವತಿಯಿಂದ ಸಾಮರಸ್ಯ ಉದ್ಯೋಗ ಘನತೆಯ ಬದುಕಿಗಾಗಿ ಧ್ಯೇಯದೊಂದಿಗೆ ಅಜ್ಜರಕಾಡಿನಲ್ಲಿರುವ ಉಡುಪಿ ವಿಮಾ ನೌಕರರ ಸಂಘದ ಕಚೇರಿಯಲ್ಲಿ ರವಿವಾರ ಹಮ್ಮಿಕೊಳ್ಳಲಾದ ಯುವಜನ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಯುವಜನತೆ ರ್ಯಾಂಕಿಗಾಗಿ ಪಠ್ಯ ಪುಸ್ತಕ ಓದುವುದರ ಜೊತೆಗೆ ಸಮಾಜ ಮುಖಿ ಸಾಹಿತ್ಯಗಳನ್ನು ಕೂಡ ಓದಬೇಕು. ಆ ಮೂಲಕ ಸಮಾಜವನ್ನು ಅರ್ಥ ಮಾಡಿಕೊಳ್ಳಬೇಕು. ಅದರ ಆಧಾರದಲ್ಲಿ ತಮ್ಮ ವ್ಯಕ್ತಿತ್ವ ಹಾಗೂ ಚಿಂತನೆಯನ್ನು ರೂಪಿಸಿ ಕೊಳ್ಳಬೇಕು. ಇಲ್ಲಿ ಯಾರು ಹೇಳಿದ್ದು ಅಂತಿಮ ಅಲ್ಲ. ಯಾವುದೇ ವಿಚಾರಗಳನ್ನು ಸ್ವಯಂ ಅಧ್ಯಯನದ ಮೂಲಕ ಅರಿತು ಕೊಳ್ಳುವ ಕಾರ್ಯ ಮಾಡಬೇಕು. ಆಗ ನಿಜವಾದ ಜಗತ್ತು ನಮಗೆ ಕಾಣಿಸಿಕೊಳ್ಳುತ್ತದೆ. ಆ ಮೂಲಕ ಉತ್ತಮ ಭಾರತ ಹಾಗೂ ಕರ್ನಾಟಕ ಕರಾವಳಿಯನ್ನು ಕಟ್ಟಲು ಸಾಧ್ಯ ಇದೆ ಎಂದರು.
ಉಡುಪಿಯಲ್ಲಿ ವಿದ್ಯಾರ್ಥಿ ಚಳವಳಿಯನ್ನು ಮತ್ತೆ ಸಕ್ರಿಯಗೊಳಿಸುವ ದೊಡ್ಡ ಜವಾಬ್ದಾರಿ ಮತ್ತು ಅವಕಾಶಗಳು ನಮ್ಮ ಮುಂದೆ ಇದೆ. ಸಮ್ಮೇಳನಗಳಲ್ಲಿ ಭಾಗವಹಿಸುವುದಕ್ಕಿಂತ ಚಳವಳಿಗಳನ್ನು ಕಟ್ಟುವುದು ಬಹಳ ಮುಖ್ಯವಾಗಿದೆ. ಆದುದ ರಿಂದ ನಮ್ಮ ಶ್ರಮದಲ್ಲಿ ಒಂದು ಭಾಗವನ್ನು ಸಮಾಜಕ್ಕೆ ಮೀಸಲಿಡ ಬೇಕು ಎಂದು ಅವರು ತಿಳಿಸಿದರು.
ಉತ್ತಮ ಬದುಕು ಸಿಗಬೇಕಾದರೆ ಶ್ರಮ ಪಡಬೇಕು. ಸಮಾಜ ಶಾಂತಿ, ನೆಮ್ಮದಿಯಿಂದ ಇಲ್ಲದಿದ್ದರೆ ನಾಳೆ ನಮ್ಮ ಬದುಕು ಕೂಡ ಒಳ್ಳೆಯದಾಗಿದ್ದರೂ ನೆಮ್ಮದಿಯಿಂದ ಇರಲು ಸಾದ್ಯವಿಲ್ಲ. ಆದುದರಿಂದ ನಾವು ನಮ್ಮ ಬದುಕನ್ನು ಕಟ್ಟಿಕೊಳ್ಳು ವುದರ ಜೊತೆಗೆ ಸಮಾಜಕ್ಕೆ ಒಳ್ಳೆಯದನ್ನು ಕೊಡಬೇಕು. ಭಗತ್‌ಸಿಂಗ್ ರಂತೆ ಸಮಾಜಕ್ಕಾಗಿ ದುಡಿಯುವ ಕಾರ್ಯ ಮಾಡಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಫೆ.25ರಿಂದ 27ರವರೆಗೆ ಮಂಗಳೂರಿನಲ್ಲಿ ನಡೆಯುವ ಡಿವೈಎಫ್‌ಐ ರಾಜ್ಯ ಸಮ್ಮೇಳನದ ಪೋಸ್ಟರ್‌ನ್ನು ಬಿಡುಗಡೆ ಮಾಡಲಾಯಿತು ಸಭೆಯಲ್ಲಿ ಡಿವೈಎಫ್‌ಐ ಮಾಜಿ ಮುಖಂಡ ಸುರೇಶ್ ಕಲ್ಲಾಗಾರ್, ಎಸ್‌ಎಫ್‌ಐ ಮಾಜಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್., ಜನವಾದಿ ಮಹಿಳಾ ಸಂಘದ ಉಡುಪಿ ಜಿಲ್ಲಾಧ್ಯಕ್ಷೆ ಸರೋಜ, ಕುಂದಾಪುರ ತಾಲೂಕು ಡಿವೈಎಫ್‌ಐ ಅಧ್ಯಕ್ಷ ಗಣೇಶ ದಾಸ್, ಕಾರ್ಯದರ್ಶಿ ನಿಸರ್ಗ ಪಡುಕೋಣೆ ಉಪಸ್ಥಿತರಿದ್ದರು.
‘ಭಗತ್ ಸಿಂಗ್, ಸಾರ್ವಕರ್‌ನಂತೆ ಬ್ರಿಟೀಷರಿಗೆ ಕ್ಷಮಾಪಾನ ಪತ್ರವನ್ನು ಬರೆದು ಕೊಟ್ಟಿದ್ದರೆ ೨೩ವರ್ಷಕ್ಕಿಂತ ಹೆಚ್ಚು ಕಾಲ ಬದುಕುತ್ತಿದ್ದರು. ಸಾರ್ವಕರ್ ಐದು ಬಾರಿ ಕ್ಷಮಾಪಾನ ಪತ್ರವನ್ನು ಪತ್ರ ಬರೆದರು. ಅದಕ್ಕಾಗಿ ಬ್ರಿಟೀಷರು ತಾವು ಭಾರತ ಬಿಟ್ಟು ಹೋಗುವವರೆಗೂ ಸಾವರ್ಕರಿಗೆ ಪಿಂಚಣಿಯನ್ನು ನೀಡಿದರು. ಆದರೆ ಇವತ್ತು ಸಾವರ್ಕರ್‌ನನ್ನು ಭಗತ್‌ಸಿಂಗ್ ಗಿಂತಲೂ ದೊಡ್ಡ ಸ್ವಾತಂತ್ರ್ಯ ಹೋರಾಟಗಾರಂತೆ ಬಿಂಬಿಸುತ್ತಿರುವುದು ದುರಂತ’
-ಮುನೀರ್ ಕಾಟಿಪಳ್ಳ, ರಾಜ್ಯಾಧ್ಯಕ್ಷರು, ಡಿವೈಎಫ್‌ಐ







