ಸರಕಾರೀಕರಣಗೊಂಡ ದೇವಳಗಳಲ್ಲಿ ಪಾರಂಪರಿಕ ಪದ್ಧತಿ ಪಾಲನೆ ಆಗಲ್ಲ: ಶಿರೂರು ಶ್ರೀ

ಉಡುಪಿ: ಸರಕಾರಿಕರಣಗೊಂಡ ದೇವಸ್ಥಾನಗಳಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪೂಜೆ ಇತ್ಯಾದಿ ಗಳ ಸಂದರ್ಭದಲ್ಲಿ ಪಾರಂಪರಿಕ ಪದ್ಧತಿಗಳು ಪಾಲನೆಯಾಗುವುದಿಲ್ಲ. ಹಾಗಾಗಿ ಯಾವುದೇ ದೇವಸ್ಥಾನಗಳು ಸರಕಾರಿ ಕರಣಗೊಳ್ಳಲು ಬಿಡಬಾರದು. ಎಲ್ಲರೂ ಒಟ್ಟಾದರೆ ದೇವಸ್ಥಾನವನ್ನು ಸರಕಾರದ ಮುಷ್ಟಿಯಿಂದ ಹೊರ ತರಲು ಸಾಧ್ಯ ಎಂದು ಉಡುಪಿ ಶೀರೂರು ಮಠಾಧೀಶ ಶ್ರೀವೇದವರ್ಧನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಉಡುಪಿ ಹೊಟೇಲೊಂದರ ಸಭಾಭವನದಲ್ಲಿ ರವಿವಾರ ನಡೆದ ಉಡುಪಿ ಜಿಲ್ಲಾ ಮಟ್ಟದ ದೇವಸ್ಥಾನ ಪರಿಷತ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ರಾಜ್ಯ ಸಂಯೋಜಕ ಮೋಹನ ಗೌಡ ಮಾತ ನಾಡಿ, ಕರ್ನಾಟಕದಲ್ಲಿ 34,000 ದೇವಸ್ಥಾನಗಳನ್ನು ಸರಕಾರ ನಿಯಂತ್ರಣ ಮಾಡುತ್ತಿದೆ. ಇದರಲ್ಲಿ ಹೆಚ್ಚಿನ ದೇವಸ್ಥಾನ ಗಳು ಅವ್ಯವಹಾರದ ಆಗರವಾಗಿದೆ. ದೇವಸ್ಥಾನಗಳು ಶಿಥಿಲಾವಸ್ಥೆ ಯಲ್ಲಿದೆ. ಈ ದೇವಸ್ಥಾನಗಳನ್ನು ಸರಕಾರದ ಮುಷ್ಟಿಯಿಂದ ಹೊರತರಲು ನಾವೆಲ್ಲ ಒಟ್ಟಾಗಿ ಹೋರಾಟ ಮಾಡಬೇಕಾಗಿದೆ ಎಂದರು.
ಸನಾತನ ಸಂಸ್ಥೆಯ ಧರ್ಮಪ್ರಚಾರಕ ಪೂ.ರಮಾನಂದ ಗೌಡ, ಕೆರ್ವಾಸೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಹಾಗೂ ಭಾರತೀಯ ವಾಯು ಸೇನೆಯ ನಿವೃತ್ತ ಸೈನ್ಯಾಧಿಕಾರಿ ರಮೇಶ ಕಾರ್ಣಿಕ್ ಉಪಸ್ಥಿತರಿದ್ದರು. ಮೂಡುಬಿದಿರೆ ಶ್ರಿವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಉಮೇಶ ಪೈ, ವಿದ್ಯಾವಂತ ಆಚಾರ್ಯ ಹಾಗೂ ದೇವಸ್ಥಾನ ವಿಶ್ವಸ್ಥರು ಮಾತನಾಡಿದರು.
ಬಳಿಕ ನಡೆದ ಗುಂಪು ಚರ್ಚೆಯಲ್ಲಿ ಜಿಲ್ಲಾದ್ಯಂತ 100ಕ್ಕೂ ಅಧಿಕ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸುವುದು ಮತ್ತು ದೇವಸ್ಥಾನಗಳಲ್ಲಿ ಧರ್ಮಶಿಕ್ಷಣ ವರ್ಗ ಪ್ರಾರಂಭಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಎಲ್ಲ ದೇವಸ್ಥಾನ ವಿಶ್ವಸ್ಥರು ಕೆಲವು ಠರಾವುಗಳಿಗೆ ಅನುಮೋದನೆ ನೀಡಿದರು. ಪರಿಷತ್ತಿನಲ್ಲಿ ಸುಮಾರು 160ಕ್ಕೂ ಹೆಚ್ಚು ದೇವಸ್ಥಾನದ ಪ್ರತಿನಿಧಿಗಳು ಭಾಗವಹಿಸಿದ್ದರು.







