ಉಡುಪಿ: ದೈವ ನರ್ತಕ ಸಾಧು ಪಾಣಾರ ನಿಧನ

ಉಡುಪಿ: ಜಿಲ್ಲೆಯ ಪ್ರಸಿದ್ಧ ದೈವ ನರ್ತಕ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಜಾನಪದ ಕಲಾವಿದ ಅಲೆವೂರು ಗ್ರಾಮದ ಮಂಚಿಕೆರೆಯ ಸಾಧು ಪಾಣಾರ (68) ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು.
ದಿ.ಜೋಗು ಹಾಗೂ ದಿ.ಕರ್ಗಿ ದಂಪತಿಯ ಪುತ್ರರಾಗಿದ್ದ ಇವರು, 45 ವರ್ಷಗಳಿಂದ ದೈವಾರಾಧನೆಯಲ್ಲಿ ತೊಡಗಿಸಿಕೊಂಡು ಬಂದಿದ್ದಾರೆ. ವಂಶ ಪಾರಂಪರ್ಯವಾಗಿ ಈ ಕಲೆಯನ್ನು ಮುಂದುವರೆಸಿಕೊಂಡು ಬಂದಿರುವ ಇವರು, ನರ್ತನ, ನುಡಿಗಟ್ಟು, ಪಾಡ್ದನ ಕಲೆಗಳನ್ನು ಕೂಡ ಕರಗತ ಮಾಡಿಕೊಂಡಿದ್ದಾರೆ.
ಉಡುಪಿ ಜಿಲ್ಲೆ ಹಾಗೂ ಹೊರ ಊರುಗಳಲ್ಲಿ ಅವರು ದೈವಾರಾಧನೆ ನಡೆಸಿರುವ ಇವರು, ಜುಮಾದಿ, ವ್ಯಾಘ್ರ ಚಾಮುಂಡಿ, ಕಲ್ಲುಕುಟ್ಟಿಗ, ಪಂಜುರ್ಲಿ, ಬಗ್ಗು ಪಂಜುರ್ಲಿ, ಬೊಬ್ಬರ್ಯ, ಮಲೆಧೂಮಾವತಿ ದೈವಗಳ ಸೇವೆ ಸಲ್ಲಿಸಿದ್ದಾರೆ. ಅವರ ಕಲಾ ಸೇವೆಯನ್ನು ಗುರುತಿಸಿ ಈಗಾಗಲೇ ಹಲವು ಸಂಘ-ಸಂಸ್ಥೆಗಳು ಗೌರವಿಸಿವೆ.
ಇವರು ಪತ್ನಿ ವಸಂತಿ ಪಾಣಾರ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಪುತ್ರ ದಿನೇಶ್ ಪಾಣಾರ ತಂದೆಯ ವೃತ್ತಿಯನ್ನೇ ನಡೆಸುತ್ತಿದ್ದಾರೆ.
Next Story





