ಕುಕ್ಕುಂದೂರು: ಸಂವಿಧಾನ ಜಾಗೃತಿ ಜಾಥ

ಉಡುಪಿ: ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಮತ್ತು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಂವಿಧಾನ ದಿನಾಚರ ಣೆಯ ಪ್ರಯುಕ್ತ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬುಧವಾರ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮ ನಡೆಯಿತು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಯಂತಿನಗರ, ಸರಕಾರಿ ಫ್ರೌಢಶಾಲೆ ನಕ್ರೆ, ಕುಕ್ಕುಂದೂರು ಮತ್ತು ಕೆಎಂಇಎಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪಥ ಸಂಚಲನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಘಟನಾ ಸಂಚಾಲಕ ಅಣ್ಣಪ್ಪ ನಕ್ರೆ ಸಂವಿಧಾನದ ಜಾಗೃತಿ ಜಾಥದ ಕುರಿತು ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆಯ ಜಯಂತಿ ಜೆ. ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಸಂವಿಧಾನ ಕುರಿತು ಏರ್ಪಡಿಸಲಾದ ಭಾಷಣ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ ಬಿ., ಕಾರ್ಕಳ ಪಂಚಾಯತ್ ಅಧ್ಯಕ್ಷೆ ಉಷಾ ಕೆ., ಕಂದಾಯ ಇಲಾಖೆ ಉಪ ತಹಶೀಲ್ದಾರ ಮಂಜುನಾಥ ನಾಯಕ್, ಕಾರ್ಕಳ ಪಂಚಾಯತ್ ಉಪಾಧ್ಯಕ್ಷ, ಗ್ರಾಪಂ ಸದಸ್ಯರು, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ,ಅಂಗನವಾಡಿ ಕಾರ್ಯಕರ್ತೆಯರು, ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.
ಕುಕ್ಕುಂದೂರು ಗ್ರಾಪಂ ಕಾರ್ಯದರ್ಶಿ ನಿರ್ಮಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು.







