ಸಂತ ಸೇವಾಲಾಲ್ ಬಂಜಾರ ಸಮುದಾಯಕ್ಕೆ ಜ್ಞಾನದ ಬೆಳಕು: ಉಡುಪಿ ಅಪರ ಜಿಲ್ಲಾಧಿಕಾರಿ

ಉಡುಪಿ: ಬಂಜಾರ ಸಮುದಾಯಕ್ಕೆ ಜ್ಞಾನದ ಬೆಳಕನ್ನು ನೀಡಿದವರು ಸಂತ ಸೇವಾಲಾಲರು. ಅಂದಿನ ಕಾಲಘಟ್ಟದಲ್ಲಿ ನೀಡಿದ ಸಂದೇಶಗಳು ಹಾಗೂ ಸಮಾಜ ಸುಧಾರಣೆಗೆ ಮಾಡಿದ ಪ್ರಯತ್ನಗಳಿಂದಾಗಿ ಅವರೊಬ್ಬ ಮಹಾನ್ ವ್ಯಕ್ತಿಯಾಗಿ ಸಮುದಾಯದಿಂದ ಪೂಜಿಸಲ್ಪಡುತಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್ ಹೇಳಿದ್ದಾರೆ.
ಗುರುವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೃಷ್ಣನಗರಿ ಶ್ರೀಸಂತ ಸೇವಾಲಾಲ್ ಬಂಜಾರ ಸಂಘ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀಸಂತ ಸೇವಾಲಾಲ ಜಯಂತಿ ಕಾರ್ಯಕ್ರಮದಲ್ಲಿ ಸಂತ ಸೇವಾಲಾಲರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು.
ಸಮಾಜದ ದೃಷ್ಟಿಕೋನ ಪ್ರತಿನಿತ್ಯ ಬದಲಾಗುತ್ತಿರುತ್ತದೆ. ಪ್ರತಿಯೊಬ್ಬರಿಗೂ ಸಮಾನ ಅವಕಾಶ ಸಿಗುವ ಮೂಲಕ ಸಾಮಾಜಿಕ ಸ್ಥಾನಮಾನ ದೊರಕು ವಂತಾಗಬೇಕು. ತಳಮಟ್ಟದ ಸಮುದಾಯಗಳ ಅಭಿವೃದ್ಧಿಗಾಗಿ ನಿಗಮಗಳನ್ನು ಹಾಗೂ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದ್ದು, ಅವುಗಳ ಸಮರ್ಪಕ ಬಳಕೆಯಾಗಬೇಕು ಎಂದರು.
ಸೇವಾಲಾಲರು ಪ್ರಪಂಚ ಪರ್ಯಟನೆ ಸಂದರ್ಭದಲ್ಲಿ ಸಂದೇಶ ನೀಡುವಾಗ ಹಲವು ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿ ನಿಂತು ಸಮಾಜಕ್ಕೆ ಸಂದೇಶ ನೀಡಿದ್ದಾರೆ. ಅವರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಆಂತರಿಕವಾಗಿ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ. ವ್ಯಕ್ತಿ ಶಕ್ತಿಯಾಗಬಹುದು ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ ಎಂದರು.
ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಕುಮಾರ್ ಎಂ. ವಿಶೇಷ ಉಪನ್ಯಾಸ ನೀಡಿ, ಬಂಜಾರ ಸಮುದಾಯ ಸ್ವಾಭಿಮಾನದಿಂದ ಬದುಕುವ ದಾರಿಯನ್ನು ತೋರಿಸಿಕೊಟ್ಟ ಮಹಾನ್ ಸಾಧಕ ಸಂತ ಸೇವಾಲಾಲರು. ಶಿಷ್ಟ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಮೂಲಕ ಸಮಕಾಲೀನ ಸಮಾಜವನ್ನು ಪರಿವರ್ತಿಸುವಲ್ಲಿ ಇವರ ಕೊಡುಗೆ ಅಪಾರ ಎಂದರು.
ಸಕಲಜೀವಿಗಳಲ್ಲಿ ದಯೆಹೊಂದಿದ ದಯಾಪೂರ್ಣ ವ್ಯಕ್ತಿ ಸೇವಾಲಾಲರು. ಪ್ರತಿಯೊಂದು ಜೀವಿಗಳನ್ನು ರಕ್ಷಿಸಬೇಕು ಎಂಬ ಮನೋಭಾವವನ್ನು ಚಿಕ್ಕಂದಿನಿಂದಲೇ ಅವರು ಹೊಂದಿದ್ದರು. ತಮ್ಮ ಜನಾಂಗದವರು ಹಲವಾರು ದುಷ್ಚಟಗಳು ಹಾಗೂ ಮೂಢನಂಬಿಕೆಗೆ ಒಳಗಾಗಿರುವುದನ್ನು ಕಂಡ ಇವರು, ಅವುಗಳಿಂದ ಹೊರತರುವ ಕೆಲಸವನ್ನು ನಿರಂತರವಾಗಿ ಮಾಡಿ ದ್ದಾರೆ ಎಂದರು.
ಬಂಜಾರರು ಸಮಾಜದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಇವರ ಸಂದೇಶಗಳು ಪ್ರೇರಕವಾಗಿವೆ. ಲಿಂಗ ಸಮಾನತೆಯನ್ನು ಪ್ರತಿಪಾದಿಸಿದ ಬಹಳ ದೊಡ್ಡ ಸಂತ ಸೇವಾಲಾಲರು, ಮಹಿಳೆಯರಿಗೆ ಸಮಾನತೆಯನ್ನು ಕಲ್ಪಿಸಬೇಕು ಎನ್ನುವುದು ಇವರ ಆಶಯವಾಗಿತ್ತು. ಶ್ರಮದ ಮೂಲಕ ಮನುಷ್ಯ ಬದುಕಬೇಕು. ವ್ಯರ್ಥ ಜೀವನ ನಡೆಸಬಾರದು ಎಂಬ ಸಂದೇಶಗಳ ಮೂಲಕ ಸಮುದಾಯದವರು ಸ್ವಾಭಿಮಾನದಿಂದ ಬದುಕು ನಡೆಸುತ್ತಿದ್ದಾರೆ. ಸಂತ ಸೇವಾಲಾಲರ ಮಾರ್ಗ ದರ್ಶನವನ್ನು ಸಮುದಾಯದವರು ಇಂದಿಗೂ ಪಾಲಿಸುತ್ತಿದ್ದಾರೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ ಕೈಜೋಡಿಸೋಣ ಎಂದರು.
ಕೃಷ್ಣನಗರಿ ಸಂತ ಶ್ರೀಸೇವಾಲಾಲ ಬಂಜಾರ ಸಂಘದ ಜಿಲ್ಲಾ ಅಧ್ಯಕ್ಷ ಕುಮಾರ್ ಕೆ.ಎಂ. ಮಾತನಾಡಿ, ಬಂಜಾರ ಸಮು ದಾಯದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಸಮಾಜದ ಜನರು ಇಂದು ಶೈಕ್ಷಣಿಕವಾಗಿ ಸಹ ಮುಂದುವರೆದಿದ್ದು, ಅನಕ್ಷರತೆ ಕಡಿಮೆಯಾಗಿದೆ. ದುಸ್ಥಿತಿಯಲ್ಲಿದ್ದ ಸಮುದಾಯ ಇಂದು ಸುಸ್ಥಿಗೆ ಬರಲು ಮೂಲ ಕಾರಣ ಸಂತ ಸೇವಾಲಾಲರು ಎಂದರು.
ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹಾಕಪ್ಪ ಆರ್. ಲಮಾಣಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ನರಸಿಂಹ ಮೂರ್ತಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಮುದಾಯದ ಮುಖಂಡರು, ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ ದರು. ಮಹೇಶ್ ಕಾರ್ಯಕ್ರಮ ನಿರೂಪಿಸಿ, ಗಂಗಾನಾಯ್ಕ್ ವಂದಿಸಿದರು.







