ರೈತ ಉತ್ಪಾದಕ ಮಾತ್ರವಲ್ಲ ಉದ್ಯಮಿ, ಮಾರಾಟಗಾರನೂ ಆಗಬೇಕು: ರೈತ ಸಮಾವೇಶದಲ್ಲಿ ಡಾ.ಎಂ.ಕೆ.ನಾಯಕ್

ಉಡುಪಿ, ಫೆ.17: ಜನರ ಹೊಟ್ಟೆ ತುಂಬಿಸುವ ಕೃಷಿಕನ ಜೇಬು ತುಂಬ ಬೇಕಿದ್ದರೆ ಆತ ಉತ್ಪಾದಕನಾಗಿದ್ದಂತೆ, ಉದ್ಯಮಿಯೂ, ಮಾರಾಟಗಾರನೂ ಆಗಬೇಕಾಗಿದೆ ಎಂದು ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿ ಲಯದ ನಿವೃತ್ತ ಕುಲಪತಿಗಳಾದ ಡಾ.ಎಂ.ಕೆ.ನಾಯಕ್ ಅಭಿಪ್ರಾಯಪಟ್ಟಿದ್ದಾರೆ.
ಉಡುಪಿ ಜಿಲ್ಲಾ ಕೃಷಿಕ ಸಂಘ ಶನಿವಾರ ನಗರದ ಕುಂಜಿಬೆಟ್ಟಿನ ಶಾರದಾ ಮಂಟಪದಲ್ಲಿ ಆಯೋಜಿಸಿದ್ದ ‘ರೈತ ಸಮಾವೇಶ-2024’ರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರ ಮಾತನಾಡುತಿದ್ದರು.
ಇಂದು ಕೃಷಿಯ ಕುರಿತಂತೆ ಹೆಚ್ಚಿನವರಿಗೆ ಆಸಕ್ತಿಯೇ ಇಲ್ಲವಾಗಿದೆ. 50 ವರ್ಷ ಮೇಲ್ಪಟ್ಟವರು ಮಾತ್ರ ಈ ಕ್ಷೇತ್ರದಲ್ಲಿದ್ದಾರೆ. ಆದರೆ ಯುವಕರು ಕೃಷಿಗಿಂತ ಬೇರೆ ಕ್ಷೇತ್ರಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತಿದ್ದಾರೆ. ಇದರೊಂದಿಗೆ ರೈತನನ್ನು ಕಾಡುಪ್ರಾಣಿಗಳ ಹಾವಳಿ ಅತಿಯಾಗಿ ಬಾಧಿಸುತ್ತಿದೆ. ಈ ಕ್ಷೇತ್ರವನ್ನು ಬಾಧಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ನಮ್ಮ ಆಡಳಿತಗಾರರು ಮುತುವರ್ಜಿ ತೋರದಿರುವುದು ರೈತರು ಹೆಚ್ಚು ಕೃಷಿಯಿಂದ ವಿಮುಖರಾಗಲು ಕಾರಣವಾಗಿದೆ ಎಂದರು.
ದೇಶದ ರೈತ ಪ್ರತಿದಿನ ನೂರಾರು ಕೋಟಿ ಹೊಟ್ಟೆಯನ್ನು ತುಂಬುತಿದ್ದಾನೆ. ಆದರೆ ರೈತ ಎಲ್ಲಾ ಬೆಳೆಗಳಿಗೂ ಅಧಿಕ ಬೆಂಬಲ ಬೆಲೆಯನ್ನು ನೀಡುವಂತೆ ಡಾ.ಸ್ವಾಮಿನಾಥನ್ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ದೆಹಲಿ ಗಡಿಯಲ್ಲಿ ಮುಷ್ಕರ ನಡೆಸಬೇಕಾಗಿದೆ ಎಂದವರು ನುಡಿದರು.
ರೈತರ ಪರಿಶ್ರಮ, ರಾಜಕೀಯ ಇಚ್ಛಾಶಕ್ತಿ ಹಾಗೂ ವೈಜ್ಞಾನಿಕ ಕೌಶಲ್ಯಗಳು ಸೇರಿ 2013ರಲ್ಲಿ ಯುಪಿಎ ಸರಕಾರದ ಅವಧಿಯಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿಗೊಂಡಿದ್ದು ಒಂದು ಐತಿಹಾಸಿಕ ಕ್ಷಣ. ಇದರಿಂದ ಕೋವಿಡ್ ಕಾಲದಲ್ಲೂ ಯಾರೊಬ್ಬರೂ ಹಸಿವಿನಿಂದ ಇರುವ ಪರಿಸ್ಥಿತಿ ಬರಲಿಲ್ಲ ಎಂದು ಡಾ.ನಾಯಕ್ ನುಡಿದರು.
ರೈತರು ವೈಜ್ಞಾನಿಕ ಕೃಷಿ ಪದ್ಧತಿಯೊಂದಿಗೆ ತನ್ನ ಉತ್ಪನ್ನಗಳ ಮೌಲ್ಯವರ್ಧನೆಗೆ ಮುಂದಾಗಬೇಕು. ಜನರ ಹೊಟ್ಟೆ ತುಂಬಿಸುವುದರೊಂದಿಗೆ ಕೃಷಿಕ ಜೇಬು ತುಂಬುವಂತಾಗಬೇಕು. ಇದಕ್ಕೆ ಆತ ಉತ್ಪಾದಕ ಮಾತ್ರವಾಗಿರದೇ ತಾನೇ ಕಂಪೆನಿಯೊಂದನ್ನು ಸ್ಥಾಪಿಸಿ ಉದ್ಯಮಿಯೂ ಆಗಬೇಕು. ಅದನ್ನು ತಾನೇ ಮಾರಾಟ ಮಾಡಿ ಲಾಭಗಳಿಸುವ ಜ್ಞಾನ ಸಂಪಾದಿಸಬೇಕು. ಈ ಸಾಮರ್ಥ್ಯ ಖಂಡಿತ ನಮ್ಮ ಕೃಷಿಕರಲ್ಲಿದೆ ಎಂದವರು ನುಡಿದರು.
ಮಂಗಳೂರು ವಲಯ ಬ್ಯಾಂಕ್ ಆಫ್ ಬರೋಡದ ವಲಯ ಮುಖ್ಯಸ್ಥರು ಹಾಗೂ ಮಹಾ ಪ್ರಬಂಧಕರಾಗಿರುವ ಗಾಯತ್ರಿ ಆರ್. ಅವರು ರೈತ ಸಮಾವೇಶವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಅಧ್ಯಕ್ಷತೆ ವಹಿಸಿದ್ದರು.
ಕಾಸರಗೋಡು ಸಿಪಿಸಿಆರ್‌ಐನ ಪ್ರಧಾನ ವಿಜ್ಞಾನಿ ಡಾ. ರವಿ ಭಟ್ ಹಾಗೂ ಕೃಷಿಕ ಸಂಘದ ಉಪಾಧ್ಯಕ್ಷ ದಿನೇಶ್ ಶೆಟ್ಟಿ ಹೆರ್ಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಕೃಷಿಕ ಸಂಘದ ಉಪಾಧ್ಯಕ್ಷರಾದ ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ ಅತಿಥಿಗಳನ್ನು ಸ್ವಾಗತಿಸಿದರೆ, ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ರೈತರ ಇಂದಿನ ಸ್ಥಿತಿಯ ಕುರಿತು ಚಿಂತನ-ಮಂಥನ ನಡೆಸಿದರು. ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.







