ಅರಾಟೆ ಬಳಿ ಬೈಕ್‌ಗೆ ಲಾರಿ ಢಿಕ್ಕಿ; ಬ್ಯಾಂಕ್ ಮ್ಯಾನೇಜರ್ ಮೃತ್ಯು

ಕುಂದಾಪುರ: ಬ್ಯಾಂಕ್ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಕೆನರಾ ಬ್ಯಾಂಕಿನ ಮ್ಯಾನೇಜರ್ ಚಲಾಯಿಸುತ್ತಿದ್ದ ಬೈಕಿಗೆ ಲಾರಿಯೊಂದು ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಅರಾಟೆ ಬಸ್ ನಿಲ್ದಾಣದ ಬಳಿ ಶನಿವಾರ ಸಂಜೆ ನಡೆದಿದೆ.
ಮಹಾರಾಷ್ಟ್ರದ ನವಿಮುಂಬೈ ನಿವಾಸಿ ರಾಹುಲ್ ಬಾಲಕೃಷ್ಣ ರಣಕಂಬೆ ಅಪಘಾತದಲ್ಲಿ ಸಾವನ್ನಪ್ಪಿದವರು. ರಾಹುಲ್ ಬಾಲಕೃಷ್ಣ ಅವರು ಮರವಂತೆಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ಮ್ಯಾನೇಜರ್ ಆಗಿದ್ದರು. ಶನಿವಾರ ಸಂಜೆ ಬ್ಯಾಂಕಿನಲ್ಲಿ ಕೆಲಸ ಮುಗಿಸಿ ತನ್ನ ಬೈಕಿನಲ್ಲಿ ಕುಂದಾಪುರದ ಮನೆ ಕಡೆಗೆ ಬರುತ್ತಿದ್ದರು.
ಈ ಸಂದರ್ಭ ಅರಾಟೆ ಬಸ್ ನಿಲ್ದಾಣದ ಬಳಿ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಲಾರಿ ಚಾಲಕ ಅತೀ ವೇಗದಿಂದ ಸಾಗಿ ಬಂದು ಹಿಂಬದಿಯಿದ್ದ ಬೈಕಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ತೀವ್ರತೆಗೆ ಸ್ಥಳದಲ್ಲಿ ಗಂಭೀರ ಗಾಯ ಗೊಂಡ ರಾಹುಲ್ ಅವರನ್ನು ಗಂಗೊಳ್ಳಿಯ ಆಪದ್ಬಾಂಧವ ಅಂಬುಲೆನ್ಸ್‌ನ ಇಬ್ರಾಹಿಂ ಗಂಗೊಳ್ಳಿ ಮತ್ತವರ ತಂಡ ತಕ್ಷಣ ಕುಂದಾಪುರದ ಆಸ್ಪತ್ರೆಗೆ ಸಾಗಿಸಿದ್ದು ದಾರಿ ಮಧ್ಯೆ ರಾಹುಲ್ ಮೃತಪಟ್ಟಿರು ವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಅಪಘಾತ ನಡೆಸಿದ ಚಾಲಕ ಲಾರಿಯನ್ನು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣ ಸ್ಥಳೀಯರು ಲಾರಿಯನ್ನು ಬೆನ್ನಟ್ಟಿ ಹಿಡಿದು ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಂಗೊಳ್ಳಿ ಠಾಣೆ ಎಸ್‌ಐ ಹರೀಶ್ ಮತ್ತು ಸಿಬ್ಬಂದಿಗಳು ಘಟನೆ ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದರು.







