ಗೂಡಂಗಡಿ ತೆರವುಗೊಳಿಸಿ ಅನ್ಯಾಯ: ದೇವೇಂದ್ರ ಸುವರ್ಣ
ಉಡುಪಿ, ಫೆ.19: ಆರೋಗ್ಯ ಸಮಸ್ಯೆ ಮತ್ತು ಜೀವನೋಪಾಯಕ್ಕಾಗಿ ಬ್ರಹ್ಮಾವರ ನೂತನ ತಹಶೀಲ್ದಾರ್ ಅವರ ಕಚೇರಿ ಬಳಿ ಗೂಡಂಗಡಿ ವ್ಯಾಪಾರ ಮಾಡಿಕೊಂಡಿದ್ದ ನನಗೆ ಅಧಿಕಾರಿಗಳು ಅನ್ಯಾಯ ಎಸಗಿದ್ದು, ಜೆಸಿಬಿ ಮೂಲಕ ಗೂಡಂಗಡಿ ಯನ್ನು ತೆರವುಗೊಳಿಸಿ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ವಡ್ಡರ್ಸೆ ಎಂ.ಜಿ. ಕಾಲೋನಿ ನಿವಾಸಿ ದೇವೇಂದ್ರ ಸುವರ್ಣ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಜಿ ಬರೆಯುವ ಕೆಲಸದ ಜತೆಗೆ ಒಂದು ಸಣ್ಣ ತಗ ಡಿನ ಗೂಡಂಗಡಿ ಮಾಡಿಕೊಂಡು ಇಬ್ಬರು ಬಡ ಮಕ್ಕಳ ಶಿಕ್ಷಣಕ್ಕಾಗಿ ದುಡಿಯುತ್ತಿದ್ದೆ. ಇದಕ್ಕಾಗಿ ತಾತ್ಕಲಿಕವಾಗಿ ಮಾನ ವೀಯ ನೆಲೆಯಲ್ಲಿ ಅವಕಾಶವನ್ನು ಕೇಳಿ ಅರ್ಜಿಯನ್ನು ಸಲ್ಲಿಸಿದ್ದೆ. ಈ ಗೂಡಂಗಡಿಯನ್ನು ಜೆಸಿಬಿ ಮೂಲಕ ತೆರವು ಮಾಡಿ ಅಂಗವಿಕಲನಾದ ನನಗೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.
ಪೊಲೀಸರಿಗೆ ದೂರು ನೀಡಲು ಹೋದರೆ ನನ್ನ ಮೇಲೆ ಕೇಸು ದಾಖಲಿಸುವು ದಾಗಿ ಬೆದರಿಸುತ್ತಾರೆ. ಗೂಡಂಗಡಿ ತೆರವು ಮಾಡಿದ ಅಂದಿನ ತಹಶೀಲ್ದಾರ್, ಉಪ ತಹಶೀಲ್ದಾರ್, ಎಡಿಸಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ತೆಗೆದು ಕೊಳ್ಳಬೇಕು. ಇಲ್ಲದಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಉಪವಾಸ ಸತ್ಯಗ್ರಹ ಮಾಡಲಿದ್ದೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಶ್ವ ಮಾನವ ಹಕ್ಕು ಲೋಕ ಪರಿಷತ್ ಅಧ್ಯಕ್ಷ ಶಂಕರ್ ಶೆಟ್ಟಿ, ಪ್ರಮುಖರಾದ ಸತೀಶ್ ಪೂಜಾರಿ ಬಾರಕೂರು, ಜಗನ್ನಾಥ್ ಮೆಂಡನ್ ಉಪಸ್ಥಿತರಿದ್ದರು.







