ಮಣಿಪಾಲ ಪರಿಸರದಲ್ಲಿ ಚಿರತೆಗಳ ಓಡಾಟ: ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ

ಮಣಿಪಾಲ: ಉಡುಪಿ ನಗರಸಭೆ ವ್ಯಾಪ್ತಿಯ ಮಣಿಪಾಲ, ಸರಳೇಬೆಟ್ಟು ಪರಿಸರದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಚಿರತೆ ಸೆರೆಗಾಗಿ ಅರಣ್ಯ ಇಲಾಖೆಯವರು ಇಂದು ಸರಳೇಬೆಟ್ಟುವಿನಲ್ಲಿ ಬೋನು ಇಟ್ಟು ಕಾರ್ಯಾಚರಣೆ ನಡೆಸಿದ್ದಾರೆ.
ಪರ್ಕಳದ ಸಣ್ಣಕ್ಕೀಬೆಟ್ಟುವಿನಲ್ಲಿ ಇಂದು ಹಗಲು ಹೊತ್ತಿನಲ್ಲಿಯೇ ಚಿರತೆ ನವೀಲನ್ನು ಹಿಡಿದು ತಿನ್ನುವ ದೃಶ್ಯ ಕಂಡುಬಂದಿದೆ ಎಂದು ಸಣ್ಣಕ್ಕಿಬೆಟ್ಟುವಿನ ಆಟೋ ಚಾಲಕ ಸುಧಾಕರ ಪೂಜಾರಿ ತಿಳಿಸಿದ್ದಾರೆ. ಮಣಿಪಾಲದ ಎಂಡ್ ಪಾಯಿಂಟ್ ಸಮೀಪದ ವಿಜಯನಗರ ಪರಿಸರದಲ್ಲಿ ಎರಡು ಮೂರು ಚಿರತೆಯ ಆರ್ಭಟಕ್ಕೆ ಕೇಳಿಸುತ್ತಿದ್ದು, ಇಲ್ಲಿ ಬೋನು ತಂದು ಇಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಸರಳೇಬೆಟ್ಟುವಿನ ಕೋಡಿಯಲ್ಲಿಯೂ ಕೂಡ ಚಿರತೆಯ ಸಂಚಾರ ಹೆಚ್ಚಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಈ ಪರಿಸರ ದಲ್ಲಿ ಎರಡು ಮೂರು ಚಿರತೆಯ ಸಂಚಾರ ಇದೆ ಎಂದು ಅವರು ತಿಳಿಸಿದ್ದಾರೆ. ಮಣಿಪಾಲದ ಪ್ರದೇಶದ ಸುತ್ತ ಮುತ್ತ ಆಹಾರ ಅರಸಿ ಬರುತ್ತಿರುವ ಚಿರತೆಗಳ ಸಂಚಾರ ಹೆಚ್ಚಾಗಿ ಕಂಡು ಬರುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.
ಸ್ಥಳೀಯರಾದ ನವೀನ್ ಪೂಜಾರಿ ಎಂಬವರ ಬಾವಿಕಟ್ಟೆಯ ಸುತ್ತಮುತ್ತ ರವಿವಾರ ಚಿರತೆ ಓಡಾಡಿಕೊಂಡಿದ್ದು, ಇದನ್ನು ಗಮನಿಸಿದ ಅವರು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅದರಂತೆ ಅರಣ್ಯ ಪಾಲಕ ದೇವರಾಜ್ ಪಾಣ ಇಂದು ಸಂಜೆ ಚಿರತೆಯ ಸೆರೆಗೆ ಬೋನನ್ನು ಸರಳೇಬೆಟ್ಟುವಿನ ನವೀನ್ ಪೂಜಾರಿ ಅವರ ಮನೆ ಬಳಿ ತಂದು ಇಡಲಾಯಿತು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು, ಬಾಬು ನಾಯ್ಕ್ ಸರಳೆಬೆಟ್ಟು. ವಿಠ್ಠಲ್ ನಾಯಕ್, ಪ್ರಕಾಶ್ ನಾಯ್ಕ್, ಮಾಧವ ನಾಯ್ಕ, ರಾಜೇಶ್ ನಾಯ್ಕ್ ಮೊದಲಾದವರು ಸಹಕರಿಸಿದರು.







