ಅಖಿಲ ಭಾರತ ಅಂತರ ವಲಯ ಅಂತರ ವಿವಿ ಚೆಸ್: ಚೆನ್ನೈನ ಎಸ್‌ಆರ್‌ಎಂ ವಿವಿಗೆ ಚಾಂಪಿಯನ್ ಪಟ್ಟ

ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆದ ಅಖಿಲ ಭಾರತ ಅಂತರ ವಲಯ ಅಂತರ ವಿಶ್ವವಿದ್ಯಾನಿಲಯಗಳ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಚೆನ್ನೈ ಎಸ್‌ಆರ್‌ಎಂ ವಿಶ್ವವಿದ್ಯಾನಿಲಯ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
ಅಸಾಧಾರಣ ಚೆಸ್ ಕೌಶಲ್ಯ, ತಂತ್ರಗಾರಿಕೆ ಹಾಗೂ ಕ್ರೀಡಾಸ್ಪೂರ್ತಿಯನ್ನು ಮೆರೆದ ಎಸ್‌ಆರ್‌ಎಂ ವಿವಿ ತಂಡ ಅಗ್ರಸ್ಥಾನ ವನ್ನು ಪಡೆದರೆ, ಚೆನ್ನೈನದೇ ಆದ ಅಣ್ಣಾ ವಿವಿ ತಂಡ ರನ್ನರ್ ಅಪ್ ಸ್ಥಾನ ಪಡೆಯಿತು. ಕೊಲ್ಕತ್ತಾದ ಅದ್ಮಾಸ್ ವಿವಿ ಮೂರನೇ ಸ್ಥಾನ ಗೆದ್ದುಕೊಂಡಿತು.
ದೇಶಾದ್ಯಂತದಿಂದ ವಿವಿಧ ವಿವಿಗಳಿಂದ ಆಗಮಿಸಿದ 100ಕ್ಕೂ ಅಧಿಕ ಚೆಸ್ ಪಟು ವಿದ್ಯಾರ್ಥಿಗಳು ಈ ಟೂರ್ನಿಯಲ್ಲಿ ಭಾಗವಹಿಸಿದ್ದರು. ನಾಲ್ವರು ಗ್ರಾಂಡ್‌ಮಾಸ್ಟರ್(ಜಿಎಂ)ಗಳು ಹಾಗೂ ಆರು ಮಂದಿ ಅಂತಾರಾಷ್ಟ್ರೀಯ ಮಾಸ್ಟರ್ (ಐಎಂ) ಗಳು ಇದರಲ್ಲಿ ಸ್ಪರ್ಧಿಸಿದ್ದು ವಿಶೇಷವಾಗಿತ್ತು. ಇದರಿಂದ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡುಬಂದಿತ್ತು.
ಐದು ಸುತ್ತಿನ ಪಂದ್ಯಗಳಲ್ಲಿ ಅಂತಿಮವಾಗಿ ಎಸ್‌ಆರ್‌ಎಂ ವಿವಿ 15.5 ಅಂಕಗಳೊಂದಿಗೆ ಅಗ್ರಸ್ಥಾನಿಯಾದರೆ, ಅಣ್ಣಾ ವಿವಿ 14.5 ಅಂಕಗಳಸಿ ಎರಡನೇ ಸ್ಥಾನಿಯಾಯಿತು. ಕೊಲ್ಕತ್ತಾ ತಂಡ 12.5 ಅಂಕಗಳಿಸಿ ತೃತೀಯ ಸ್ಥಾನವನ್ನು ಪಡೆದರೆ, ದಿಲ್ಲಿ ವಿವಿ (12) ನಾಲ್ಕನೇ ಹಾಗೂ ಸಾವಿತ್ರಿಬಾಯಿ ಫುಲೆ ವಿವಿ ಪುಣೆ (12) ಐದನೇ ಸ್ಥಾನಗಳನ್ನು ಪಡೆದವು.
ರವಿವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳು ಹಾಗೂ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಉದ್ಘಾಟನೆ: ಅಸೋಸಿಯೇಶನ್ ಆಪ್ ಇಂಡಿಯನ್ ವಿವಿಯ ಸಹಯೋಗದೊಂದಿಗೆ ಆಯೋಜಿಸಿದ ಈ ಟೂರ್ನಿಯನ್ನು ಮಾಹೆಯ ಪೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅವರು ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ.ಶರತ್ ಕೆ.ರಾವ್ ಅವರೊಂದಿಗೆ ಚೆಸ್‌ಬೋರ್ಡ್‌ನಲ್ಲಿ ಪಾನ್‌ನ್ನು ಚಲಿಸುವ ಮೂಲಕ ಸ್ಪರ್ಧೆಯನ್ನು ಉದ್ಘಾಟಿಸಿದರು.







