ಜನಜಾಗೃತಿಗಾಗಿ ಕೆಆರ್‌ಎಸ್ ಪಕ್ಷದಿಂದ ರಾಜ್ಯವ್ಯಾಪಿ ಬೈಕ್ ಜಾಥಾ
ಫೆ.22: ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಉಡುಪಿಗೆ

ಉಡುಪಿ: ಸ್ವಚ್ಛ ಪ್ರಾಮಾಣಿಕ, ಜನಪರ, ಪ್ರಾದೇಶಿಕ ರಾಜಕಾರಣದ ಕುರಿತು ಜನಜಾಗೃತಿ ಮೂಡಿಸಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್) ಪಕ್ಷ ಅಧ್ಯಕ್ಷರಾದ ರವಿಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ರಾಜ್ಯವ್ಯಾಪಿ ಬೈಕ್ ರ್ಯಾಲಿ ಫೆ.22ರಂದು ಉಡುಪಿಗೆ ಆಗಮಿಸಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಸದಾಶಿವ ಕೋಟೆಕಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು, ‘ಕರ್ನಾಟಕಕ್ಕಾಗಿ ನಾವು’ ಘೋಷಣೆಯೊಂದಿಗೆ ಫೆ.19ರಂದು ಬೆಂಗಳೂರಿನ ದೇವನಹಳ್ಳಿಯಿಂದ ಪ್ರಾರಂಭಗೊಂಡಿರುವ ಈ ಬೈಕ್ ರ್ಯಾಲಿ ಮಾ.2 ಶನಿವಾರದವರೆಗೆ ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಸಂಚರಿಸಲಿದೆ. 29 ಜಿಲ್ಲಾ ಕೇಂದ್ರಗಳು ಹಾಗೂ 50ಕ್ಕಿಂತ ಅಧಿಕ ತಾಲೂಕು ಕೇಂದ್ರಗಳು ಸೇರಿದಂತೆ ಸುಮಾರು 82 ನಗರ-ಪಟ್ಟಣಗಳಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದರು.
ಈ ಜಾಥಾವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಿಂದ ಪ್ರಾರಂಭಗೊಂಡಿದ್ದು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ ಜಿಲ್ಲೆ, ರಾಮನಗರ, ಮಂಡ್ಯ, ಚಾಮರಾಜನಗರ, ಮೈಸೂರು, ಕೊಡಗು, ಮಂಗಳೂರು ಮೂಲಕ ಫೆ.22ರಂದು ಉಡುಪಿಗೆ ಅಪರಾಹ್ನ 12:30ಕ್ಕೆ ಆಗಮಿಸಲಿದೆ. ಉಡುಪಿಯ ಸರ್ವಿಸ್ ಬಸ್ ನಿಲ್ದಾಣದ ಬಳಿ ನಡೆಯುವ ಬಹಿರಂಗ ಸಭೆಯಲ್ಲಿ ರವಿಕೃಷ್ಣಾ ರೆಡ್ಡಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡ ಲಿದ್ದಾರೆ ಎಂದರು.
ಬಳಿಕ ಅವರು ಕುಂದಾಪುರ, ತ್ರಾಸಿ, ಬೈಂದೂರು, ಭಟ್ಕಳ, ಹೊನ್ನಾವರ, ಕಾರವಾರಗಳಲ್ಲೂ ಸಾರ್ವಜನಿಕ ಸಭೆಗಳಲ್ಲಿ ಮಾತನಾಡಲಿದ್ದಾರೆ. ಆ ಬಳಿಕ ಜಾಥವು ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್ ಮೂಲ ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಸಂಚರಿಸಿ ಹಾಸನ ಮಾರ್ಗವಾಗಿ ಮಾ.2ರಂದು ತುಮಕೂರು ತಲುಪಲಿದೆ. ಅಂದು ನೆಲಮಂಗಲದಲ್ಲಿ ಬೃಹತ್ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಕೋಟೆಕಾರ್ ತಿಳಿಸಿದರು.
ಕೆಆರ್‌ಎಸ್ ಪಕ್ಷವು 2021ರಲ್ಲಿ ರವಿಕೃಷ್ಣಾ ರೆಡ್ಡಿ ಅವರ ನೇತೃತ್ವದಲ್ಲಿ ‘ಲಂಚಮುಕ್ತ ಕರ್ನಾಟಕ’ ಅಭಿಯಾನದಲ್ಲಿ 32 ದಿನಗಳ 3500ಕಿ.ಮೀ.ಗಳ ಬೈಕ್ ಜಾಥಾವನ್ನು ಹಮ್ಮಿಕೊಂಡಿತ್ತು. ಈ ವೇಳೆ ರಾಜ್ಯದ ಸಾವಿರಾರು ಮಂದಿ ಪಕ್ಷದ ಸದಸ್ಯತ್ವವನ್ನು ಪಡೆದುಕೊಂಡಿದ್ದು, ನೂರಾರು ಮಂದಿ ದೇಣಿಗೆಯನ್ನು ನೀಡಿದ್ದರು ಎಂದವರು ಹೇಳಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೆಆರ್‌ಎಸ್ ಪಕ್ಷವು ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲೂ ಸ್ಪರ್ಧಿಸಲು ನಿರ್ಧರಿಸಿದೆ. ಅದೇ ರೀತಿ ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಅಲ್ಲದೇ ಬಿಬಿಎಂಪಿ ಚುನಾವಣೆಗಳಲ್ಲೂ ಕೆಆರ್‌ಎಸ್ ಪಕ್ಷ ಅಭ್ಯರ್ಥಿಗಳನ್ನು ನಿಲ್ಲಿಸಲಿದ್ದು, ಪ್ರಾಮಾಣಿಕ ಹಾಗೂ ನ್ಯಾಯಪರ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಯತ್ನಿಸಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಜು ಪಿ.ಬಸ್ರೂರು, ಸಹ ಉಸ್ತುವಾರಿ ಎಂ.ಇಕ್ಬಾಲ್ ಕುಂಜಿಬೆಟ್ಟು ಹಾಗೂ ಅಶ್ಫಾಕ್ ಉಪಸ್ಥಿತರಿದ್ದರು.







