ಜವಾಬ್ದಾರಿ ಅರಿತು ತಂಡವಾಗಿ ಕೆಲಸ ಮಾಡೋಣ: ಕಿಶೋರ್ ಕುಮಾರ್
ಬಿಜೆಪಿ ಜಿಲ್ಲಾ ನೂತನ ಪದಾಧಿಕಾರಿಗಳ ಸಭೆ

ಉಡುಪಿ: ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ನೂತನ ತಂಡ ರಚನೆ ಯಾಗಿದೆ. ಜಿಲ್ಲಾ ಸಮಿತಿ ಮತ್ತು ಮಂಡಲ, ಮೋರ್ಚಾ, ಪ್ರಕೋಷ್ಠಗಳ ಸಹಿತ ಎಲ್ಲರೂ ತಮ್ಮ ಜವಾಬ್ದಾರಿಯನ್ನು ಅರಿತು ಒಂದು ಉತ್ತಮ ತಂಡವಾಗಿ ಕೆಲಸ ಮಾಡಬೇಕಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದ್ದಾರೆ.
ಕುಂಜಿಬೆಟ್ಟಿನ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ನೂತನ ಪದಾಧಿಕಾರಿಗಳ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಎಲ್ಲಾ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡುತಿದ್ದರು.
ಬಿಜೆಪಿ ಕಾರ್ಯಕರ್ತ ಆಧಾರಿತ ಪಕ್ಷ. ಕಾರ್ಯಕರ್ತರ ಸಮರ್ಪಣಾ ಭಾವದ ಸೇವೆ ಮತ್ತು ಪಕ್ಷದ ಸಂಘಟನಾ ಸಾಮರ್ಥ್ಯ ದಿಂದ ಬಿಜೆಪಿ ಇಂದು ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿದೆ. ಪಕ್ಷದ ಚಟುವಟಿಕೆಗಳಿಗೆ ಆದ್ಯತೆ ಮೇರೆಗೆ ಸಮಯವನ್ನು ನೀಡಿ, ಪಕ್ಷ ಸಂಘಟನೆಯ ಜೊತೆಗೆ ಪಕ್ಷದ ಎಲ್ಲ ಅಭಿಯಾನಗಳನ್ನು ಸಮಯದ ಇತಿಮಿತಿಯೊಳಗೆ ಸಮರ್ಪಕವಾಗಿ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಬದ್ಧತೆಯಿಂದ ತೊಡಗಿಸಿ ಕೊಳ್ಳಬೇಕು ಎಂದವರು ಕರೆ ನೀಡಿದರು.
ಬಿಜೆಪಿ ಉಡುಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ಜಿಲ್ಲೆಯಲ್ಲಿ ಒಳ್ಳೆಯ ತಂಡ ರಚನೆಯಾಗಿದೆ. ಚುನಾವಣಾ ಪರ್ವದ ಈ ಸನ್ನಿವೇಶದಲ್ಲಿ ಪದಾಧಿಕಾರಿಗಳು ಪಕ್ಷದ ಕಛೇರಿಗೆ ಭೇಟಿ ನೀಡಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಪರಿಪಾಠ ಅಗತ್ಯ. ರಾಜ್ಯ ಬಿಜೆಪಿ ನೀಡುವ ಕಾರ್ಯಕ್ರಮಗಳನ್ನು ಬದ್ಧತೆಯಿಂದ ಪೂರೈಸುವ ಜೊತೆಗೆ ಪಕ್ಷದ ನಿಗದಿತ ಸಭೆಗಳಿಗೆ ತಪ್ಪದೇ ಹಾಜರಾಗಿ ಸದೃಢ ಪಕ್ಷ ಸಂಘಟನೆಯ ಮೂಲಕ ಜಿಲ್ಲೆಯ ವಿಜಯ ಯಾತ್ರೆಯನ್ನು ಮುಂದುವರಿಸಲು ಅಧ್ಯಕ್ಷರೊಂದಿಗೆ ಕೈಜೋಡಿಸಬೇಕು ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯಕುಮಾರ್ ಶೆಟ್ಟಿ ರಾಜ್ಯ ಬಿಜೆಪಿ ನೀಡಿರುವ ನಾಲ್ಕು ಅಭಿಯಾನ ಗಳಾದ ಗ್ರಾಮ ಚಲೋ, ಶಕ್ತಿ ವಂದನಾ, ‘ಮೋದಿ ಮತ್ತೊಮ್ಮೆ’ ಗೋಡೆ ಬರಹ ಮತ್ತು ಲಾಭಾರ್ತಿಗಳ ಸಮಾವೇಶದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ನೂತನ ಪದಾಧಿಕಾರಿಗಳು ಮತ್ತು ಮಂಡಲಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ ಸ್ವಾಗತಿಸಿ, ದಿನಕರ ಶೆಟ್ಟಿ ಹೆರ್ಗ ವಂದಿಸಿದರು.ರೇಷ್ಮಾ ಉದಯ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.







