ಉಡುಪಿ: ಪುತ್ತಿಗೆ ಮಠದಿಂದ ವಾದಿರಾಜ ತೀರ್ಥರ ಜಯಂತಿ

ಉಡುಪಿ : ಮಧ್ವಾಚಾರ್ಯರು 800 ವರ್ಷಗಳ ಹಿಂದೆ ಉಡುಪಿಯಲ್ಲಿ ಶ್ರೀಕೃಷ್ಣನನ್ನು ಸ್ಥಾಪಿಸಿ ನಿತ್ಯ ಪೂಜೆಗಾಗಿ ಆರಂಭಿ ಸಿದ ಎರಡು ತಿಂಗಳ ಪರ್ಯಾಯವನ್ನು ಎರಡು ವರ್ಷ ವಿಸ್ತರಿಸುವ ನಿರ್ಣಯಕ್ಕೆ ಅಷ್ಟಮಠಗಳ ಒಮ್ಮತವೇ ಸೋದೆ ಶ್ರೀವಾದಿರಾಜತೀರ್ಥರ ಪವಾಡಕ್ಕೆ ಸಾಕ್ಷಿ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರು ಹೇಳಿದ್ದಾರೆ.
ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಪುತ್ತಿಗೆ ಮಠದ ಮೂಲ ಯತಿ ಶ್ರೀಮದುಪೇಂದ್ರತೀರ್ಥರ ಆರಾಧನೆ ಹಾಗೂ ಸೋದೆ ಶ್ರೀವಾದಿರಾಜತೀರ್ಥರ ಜಯಂತಿ ಅಂಗವಾಗಿ ಬುಧವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡುತಿದ್ದರು.
ಸೋದೆ ಮಠದ ಶ್ರೀವಾದಿರಾಜ ಯತಿಗಳು ಸಮಾಜದಲ್ಲಿ ಯತಿಗಳು ಹೇಗಿರಬೇಕೆಂಬುದಕ್ಕೆ ಮಾದರಿಯಾಗಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಅವರ ಹಿರಿಮೆಯಾಗಿದೆ. ಯತಿ ಪ್ರಪಂಚಕ್ಕೆ ಮಾದರಿಯಾದ ಮಧ್ವಾಚಾರ್ಯರ ಪರಿಪೂರ್ಣತೆಯ ಪ್ರತಿರೂಪವೇ ವಾದಿರಾಜರು ಎಂದವರು ಅಭಿಪ್ರಾಯಪಟ್ಟರು.
ಸಮಾಜದಲ್ಲಾಗಲಿ, ಮನೆಯಲ್ಲಿ ಅನ್ಯರನ್ನು ಕಚ್ಚುವುದು ತಪ್ಪು. ಆದರೆ ನಮ್ಮ ರಕ್ಷಣೆಗೆ ಬುಸುಗುಟ್ಟುವುದು ತಪ್ಪಲ್ಲ. ಎದುರಿ ನವರನ್ನು ಮಾತಿನ ಆಯುಧದಿಂದಲೇ ಹೋರಾಡಿ ಸೋಲಿಸುವ ಯುಕ್ತಿ ಹೊಂದಿದ್ದ ಉಪೇಂದ್ರ ತೀರ್ಥರು ಉಪಾಯೇಂದ್ರರು ಎಂದು ಪುತ್ತಿಗೆಶ್ರೀಗಳು ಬಣ್ಣಿಸಿದರು.
ಮಹಿತೋಷ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಧ್ವೇಶಾಚಾರ್ಯರಿಂದ ಉಪನ್ಯಾಸ ನಡೆಯಿತು.
ಇದಕ್ಕೂ ಮೊದಲು ಮಧ್ವಮಂಟಪದಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಉದಯಾಸ್ತಮಾನ ಹಯವದನಾಂಕಿತ ಕೀರ್ತನೆ ಗಳ ಗಾಯನ, ತುಶಿಮಾಮ ವತಿಯಿಂದ ಮಧ್ವ ಯಾನ ಗಾನ ನಮನ, ರಥಬೀದಿಯಲ್ಲಿ ಶ್ರೀವಾದಿರಾಜರ ಚಿತ್ರ, ಗ್ರಂಥವನ್ನು ನವರತ್ನ ರಥದಲ್ಲಿಟ್ಟು ಮೆರವಣಿಗೆ ನಡೆಯಿತು.







